ಗ್ರಿಡ್ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆಗೆ ಆಹ್ವಾನ
ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರ ಬೇಡಿಕೆ ಈಡೇರಿಕೆಗೆ ಕಾಲ ಹತ್ತಿರ
ಬನವಾಸಿ 28: ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರ ಬಹು ಬೇಡಿಕೆಯ ವಿದ್ಯುತ್ ಸಬ್‌ಗ್ರಿಡ್ ಕನಸು ನನಸಾಗುವ ಸಮಯ ಹತ್ತಿರವಾಗಿದ್ದು ಕೆಪಿಟಿಸಿಎಲ್ ವತಿಯಿಂದ 110/11ಕೆವಿ ಗ್ರಿಡ್ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆಗೆ ಆಹ್ವಾನ ಆರಂಭಗೊಂಡಿದೆ.
2012ರಲ್ಲಿಯೇ ಗ್ರಿಡ್ ಸ್ಥಾಪನೆಗೆ ಸಮೀಪದ ಕಡಗೋಡದಲ್ಲಿ ಒಂದು ಹೆಕ್ಟೇರ್ ಅರಣ್ಯ ಭೂಮಿ ಮಂಜೂರಾಗಿತ್ತು. 2017ರಲ್ಲಿ ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿತ್ತು. ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಸತತ ಪ್ರಯತ್ನದಿಂದ ಗ್ರಿಡ್ ಸ್ಥಾಪನೆಗೆ ಸಂಪೂರ್ಣ ಅನುಮತಿ ದೊರೆತಿದ್ದು ಟೆಂಡರ್ ಆಹ್ವಾನ ಮಾಡಲಾಗಿದೆ.
ವಿದ್ಯುತ್ ಒತ್ತಡ ಕಡಿಮೆ ಮಾಡಲು ಶೀಘ್ರದಲ್ಲಿ ಸಬ್‌ಗ್ರಿಡ್ ಸ್ಥಾಪನೆಯಾಗಬೇಕು ಎನ್ನುವುದು ಬನವಾಸಿ ಹಾಗೂ ಸುತ್ತಮುತ್ತಲಿನ ಭಾಗದ ಜನರ ಆಗ್ರಹವಾಗಿತ್ತು. ಈಗ 9.5ಕೋಟಿ ರೂ. ವೆಚ್ಚದಲ್ಲಿ ಸಬ್‌ಗ್ರಿಡ್ ನಿರ್ಮಾಣಕ್ಕೆ ಬಿಡ್ ಆಹ್ವಾನ ನೀಡಲಾಗಿದ್ದು ಇದರಿಂದ ಬನವಾಸಿ ಪಂಚಾಯಿತಿಯ ನೂರಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಉಪಯುಕ್ತವಾಗಲಿದೆ. ನೀರಾವರಿ ಕೃಷಿಯನ್ನೆ ಅವಲಂಭಿಸಿಕೊಂಡಿರುವ ಇಲ್ಲಿನ ಜನತೆ ಹಾಗೂ ಸಣ್ಣ ಕೈಗಾರಿಕೋದ್ಯಮಗಳು ಲೋ ವೋಲ್ಟೇಜ್ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ ಗ್ರಿಡ್ ಸ್ಥಾಪನೆಯಾಗುವುದರಿಂದ ಎಲ್ಲವೂ ಸರಿ ಹೋಗಲಿದೆ.
ಗ್ರಿಡ್ ಸ್ಥಾಪನೆಗೆ ಈಗಗಾಲೇ ಟೆಂಡರ್ ಕರೆಯಲಾಗಿದೆ. ಈ ಮೊದಲು ಮೂರು ಫೀಡರ್‌ಗಳಿಂದ ಬನವಾಸಿಗೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಈಗ ಎಲ್ಲವೂ ಸಬ್‌ಗ್ರಿಡ್ ಅಡಿಯಲ್ಲಿ ಬಂದು ವೋಲ್ಟೆಜ್ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. 110/11ಕೆವಿ ಗ್ರಿಡ್‌ಗೆ ಸಮೀಪದ ಜಡೆ ಉಪಕೇಂದ್ರದಿಂದ ಸಂಪರ್ಕ ನೀಡಲು ನಿರ್ಣಯಿಸಲಾಗಿದೆ. ಬನವಾಸಿಯಲ್ಲಿ ಗ್ರಿಡ್ ಸ್ಥಾಪನೆಯಾಗುವುದರಿಂದ ಶಿರಸಿ, ಎಸಳೆಯ ಗ್ರಿಡ್ ಮೇಲಿನ ಒತ್ತಡ ಕಡಿಮೆಯಾಗಲಿದೆ. ಬಹುದಿನದ ಕನಸು ನನಸಾಗಿಸಿದ ಶಾಸಕರ ಕಾರ್ಯವನ್ನು ಶ್ಲಾಘೀಸಿದ ಜನರು ಅದಷ್ಟು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿ ಎಂದು ಆಶಿಸಿದ್ದಾರೆ.
ಬನವಾಸಿಯಲ್ಲಿ 9.5ಕೋಟಿ ವೆಚ್ಚದಲ್ಲಿ 110/11ಕೆವಿ ಗ್ರಿಡ್ ಸ್ಥಾಪನೆಗೆ ಟೆಂಡರ್ ಕರೆಯಲಾಗಿದ್ದು ಜೂ.4ಕ್ಕೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಕೃಷಿಕರಿಗೆ ಆಗುತ್ತಿದ್ದ ತೊಂದರೆಯನ್ನು ಅರಿತು ಗ್ರಿಡ್ ಸ್ಥಾಪನೆಗೆ ಸುದೀರ್ಘ ಹೋರಾಟ ನಡೆಸಿದ ಪರಿಣಾಮ ಈಗ ಯಶಸ್ವಿ ಲಭಿಸಿದೆ. ವರದಾ ನದಿಯಿಂದ ಕೆರೆ ತುಂಬಿಸುವ ಯೋಜನೆಗೆ ಗ್ರಿಡ್ ಸ್ಥಾಪನೆ ಅವಶ್ಯಕತೆ ಇದ್ದು ಮುಂದೆಯೂ 2 ನೇ ಹಂತದ ಕೆರೆ ತುಂಬಿಸುವ ಯೋಜನೆಗೆ ಅನುಕೂಲವಾಗಿದೆ. ವಿದ್ಯುತ್ ತೊಂದರೆಯನ್ನು ಅನುಭವಿಸುತ್ತಿದ್ದ ರೈತರ ಬೇಡಿಕೆಯಾಗಿದ್ದ ಗ್ರಿಡ್ ಸ್ಥಾಪನೆಯ ನನ್ನ ಬೇಡಿಕೆಗೆ ಸ್ಪಂದಿಸಿ ವಿದ್ಯುತ್ ಉಪಕೇಂದ್ರ ಮಂಜೂರು ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪ ಹಾಗೂ ಕೆಲಸಕ್ಕೆ ಸಹಕರಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೆನೆ.
ಶಿವರಾಮ್ ಹೆಬ್ಬಾರ್
ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ