ಭಾರತೀಯ ಮಹಿಳೆ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖಳಾಗಿದ್ದಾಳೆ: ಅಣ್ಣುಗೌಡ ಪಾಟೀಲ
ರಾಣೀಬೆನ್ನೂರ 08: ಸಮಾಜದಲ್ಲಿ ಭಾರತೀಯ ನಾರಿಗೆ ಭೂಮಿಗೆ ಹೋಲಿಸಿದ್ದಾರೆ. ಮಹಿಳೆ ತಾಯಿಯಾಗಿ ತಂಗಿಯಾಗಿ ಕುಟುಂಬದ ಹಿರಿಯ ಸಹೋದರಿಯಾಗಿ ಸಮಸ್ತ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತು ಸಮಾನತೆಯ ಮನೋಭಾವನೆಯೊಂದಿಗೆ ಭೂಮಿ ತೂಕದ ಹೆಣ್ಣಾಗಿ ಗುರುತಿಸಿಕೊಂಡು ಸದಾಕಾಲವು ಗೌರವಿಸಲ್ಪಡುತ್ತಾಳೆ. ಇದು ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯ ಪರಂಪರೆಯಾಗಿದೆ. ಹೆಣ್ಣನ್ನು ಗೌರವಿಸದೆ ಇರುವ ಯಾವುದೇ ಸಮಾಜ ಅಭಿವೃದ್ಧಿ ಕಾಣಲು ಸಾದ್ಯವಿಲ್ಲ ಅದಕ್ಕಾಗಿ ಭಾರತೀಯ ಸ್ತ್ರೀಗೆ ಸದಾ ಮಾನ, ಮನ್ನಣೆ, ಗೌರವ, ಸನ್ಮಾನಗಳು ನಡೆಯುತ್ತಲಿವೆ ಎಂದು 2ನೇ ಹೆಚ್ಚುವರಿ ಜಿಲ್ಲಾ ವ ಸತ್ರ ನ್ಯಾಯಾಧೀಶ ಅಣ್ಣುಗೌಡ ಪಾಟೀಲ ಹೇಳಿದರು.
ಅವರು ಸೋಮವಾರ ವಕೀಲರ ಸಂಘದ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಕೀಲರ ಸಂಘ ತಾಲೂಕು ಕಾನೂನು ಸೇವಾ ಸಮಿತಿ ಮತ್ತಿತರೆ ಸಂಘಟನೆಗಳು ಆಯೋಜಿಸಿದ್ದ ಮಹಿಳಾ ಸಾಧಕರ ಅಭಿನಂದನಾ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಧನೆ ಅಷ್ಟು ಸುಲಭವೂ ಅಲ್ಲ, ಕಷ್ಟವೂ ಅಲ್ಲ, ನಿತ್ಯದ ಬದುಕಿನಲ್ಲಿ ಸಾಧಿಸುವ ಸಂಕಲ್ಪ ಹೊಂದಿ ಮಾಡುವ ಕಾಯಕದಲ್ಲಿ ಕರ್ತವ್ಯ ದಕ್ಷತೆ ಮೆರೆಯುತ್ತಾ ಸಾಗಿದರೆ ಅದು ತನ್ನಿಂದ ತಾನೇ ಸಾಧನಾ ಪ್ರಪಂಚಕ್ಕೆ ಕರೆದೊಯ್ಯುತ್ತದೆ ಎಂದ ಅವರು ಮಹಿಳೆಯರು ಈ ಹಿಂದಿಗಿಂತಲೂ ಇಂದು ಬಹಳಷ್ಟು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿರುವದನ್ನು ನೋಡಿದರೆ ಈ ದೇಶ ಅಭಿವೃದ್ಧಿ ಪಥದತ್ತ ಸಾಗಿದಂತಾಗಿದೆ ಎನ್ನಬೇಕಾಗಿದೆ ಎಂದರು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜೇಶ ಕಮತೆ, ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾ.ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಯೋಗೇಶ ಜೆ., 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಜೆ.ವಿ.ಕುಲಕರ್ಣಿ, 3ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಶರವಣನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಉಪಾಧ್ಯಕ್ಷ ಕುಮಾರ ಡಿ.ಮಡಿವಾಳರ, ವಿಠಲ ಪುಠಾಣಿಕರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕ ಗಣ್ಯರಾದ ವಿಜಯಲಕ್ಷ್ಮೀ ದೇಸಾಯಿ, ಜಯಶ್ರೀ ಪಾಟೀಲ, ಅನಸೂಯಾ ರಾಠೋಡ, ಸುಧಾ ಎಸ್.ಅಜ್ಜಪ್ಪನವರ, ಗೀತಾ ರಾ.ಪಂಡಿತ್, ಸುಧಾ ಹಿರೇಮಠ, ರಾಜೇಶ್ವರಿ ಕದರಮಂಡಲಗಿ, ರೇಣುಕಾ ಶಿವರಾಯನಗೌಡ, ದ್ರಾಕ್ಷಾಯಿಣಿ ಬಿ.ಎಂ. ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನ್ಯಾಂiÀiವಾದಿ ಕೆ.ಶಿವಲಿಂಗಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಯಶೋಧಾ ಲತಾ ದೊಡ್ಮನಿ ಪ್ರಾರ್ಥಿಸಿದರು ನಂದಿನಿ ಜೋಶಿ ನಿರೂಪಿಸಿ ಅನುಪಮಾ ಕಣವಿ ಸ್ವಾಗತಿಸಿ ಶೈಲಜಾ ಬಣಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಕೆ.ಮುಂಡಾಸದ ವಂದಿಸಿದರು. ನಂತರ ನ್ಯಾಯಾಧೀಶ ಶರವಣನ್ ಎಸ್.ಅವರು ಪ್ರಸ್ತುತ ಪಡಿಸಿದ ಕನ್ನಡ ಚಲನಚಿತ್ರ ಗೀತೆಗಳು ಸೇರಿದ ವಕೀಲರ ಸಮುದಾಯಕ್ಕೆ ವಿಶೇಷ ಮೆರಗು ನೀಡಿದ್ದರು.