ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾರ್ಚ 25 ರಂದು ಜರುಗಿದ ದಿನದರ್ಶಿಕೆ ಹಾಗೂ ದಿನಚರಿ ವಿತರಣೆ; ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿ
ಧಾರವಾಡ ಮಾ.26: ಕೌಶಲ್ಯಭಿವೃದ್ದಿ, ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಧಾರವಾಡ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಸಂಜೀವಿನಿ ಯೋಜನೆಯ ದಿನದರ್ಶಿಕೆ (ಕ್ಯಾಲೆಂಡರ್) ಮತ್ತು ಎನ್.ಆರ್.ಎಲ್.ಎಂ. ದಿನಚರಿ ವಿತರಣಾ ಕಾರ್ಯಕ್ರಮವನ್ನು ಮಾರ್ಚ 25, 2026 ರಂದು ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಯು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಖೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸುವ ದಿನವಾಗಿದೆ ಎಂದು ಹೇಳಿದರು.
ಲಿಂಗ ಸಮಾನತೆ, ಮಹಿಳಾ ಸಬಲೀಕರಣದ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿ, ಮಹಿಳೆಯರು ಶೋಷಣೆಯ ವಿರುದ್ಧ ಧ್ವನಿ ಎತ್ತಬೇಕು. ಕೇವಲ ಮನೆಗೆ ಸೀಮಿತವಾಗಬಾರದು. ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮರ್ಥಳಾಗಿ ಸಾಧನೆ ಮಾಡುವಂತಾಗಬೇಕು. ಸಮಾಜದಲ್ಲಿ ಲಿಂಗ ಅಸಮಾನತೆ, ತಾರತಮ್ಯ, ಹಿಂಸೆ, ಭ್ರೂಣ ಹತ್ಯೆ ಇವುಗಳ ವಿರುದ್ಧ ಧ್ವನಿ ಎತ್ತಬೇಕು ಮತ್ತು ತಮ್ಮ ಸುರಕ್ಷತೆ ಸಮಾನ ಅವಕಾಶ ಕಲ್ಪಿಸುವ ವಾತಾವರಣವನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಗೌರವಯುತವಾಗಿ ಬದುಕನ್ನು ನಡೆಸಬೇಕೆಂದು ಅವರು ಹೇಳಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಮಹಿಳೆಯರು ಯಾವುದೇ ಕಾರ್ಯಗಳನ್ನು ಕೈಗೊಂಡಾಗ ನಿರ್ಣಯವನ್ನು ತಾವೇ ಖುದ್ದಾಗಿ ತೆಗೆದುಕೊಳ್ಳುವಂತಾಗಬೇಕು. ತಮ್ಮ ನಿರ್ಣಯವನ್ನು ಬೇರೆಯವರು ತೆಗೆದುಕೊಳ್ಳುವಂತೆ ಅವಲಂಬಿತ ಆಗಬಾರದು ಎಂದು ಅವರು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘಗಳು ಮತ್ತು ಒಕ್ಕೂಟಗಳು ಬಹಳಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಂಡು ಆಸಕ್ತಿಯಿಂದ ನಿರ್ವಹಿಸಬೇಕು. ಮಹಿಳೆಯರಿಗೆ ಸಮಾನ ಹಕ್ಕುಗಳು ಇದ್ದು, ನಿರ್ಣಯ ತೆಗೆದುಕೊಳ್ಳಲು ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಅರಿವು ಇರಬೇಕು. ಮಹಿಳೆಯರು ಕುಟುಂಬ ಮತ್ತು ಕುಟುಂಬದ ಸದಸ್ಯರ ಎಲ್ಲ ಆಗು ಹೋಗುಗಳ ಬಗ್ಗೆ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಸಹನೆ ಮತ್ತು ತಾಳ್ಮೆಯಿಂದ ಹೋಗಬೇಕಾದ ಜವಾಬ್ದಾರಿ ಇರುತ್ತದೆ.
ಸಮಾನ ಅವಕಾಶದೊಂದಿಗೆ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವರ್ಷದ ಪ್ರಶಸ್ತಿ ಪಡೆದ ಸ್ವ-ಸಹಾಯ ಸಂಘ ಮತ್ತು ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಿಗೆ ಅಭಿನಂದಿಸಿದರು. ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಿಗೆ ಹಾಗೂ ಸ್ವ-ಸಹಾಯ ಸಂಘಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ ಒಕ್ಕೂಗಳು: ಅತ್ಯುತ್ತಮ ಸಾಧನೆ ಮಾಡಿದ 21 ಗ್ರಾಮ ಪಂಚಾಯತ ಒಕ್ಕೂಗಳ ಪೈಕಿ ಪ್ರಥಮ ಬಹುಮಾನ ಧಾರವಾಡ ತಾಲ್ಲೂಕಿನ ಗರಗ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ರೂ.75,000 ಗಳನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ದ್ವಿತೀಯ ಬಹುಮಾನ ಪಡೆದ ಅಳ್ನಾವರ ತಾಲ್ಲೂಕಿನ ಬೆಣಚಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ರೂ.50,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ತೃತೀಯ ಬಹುಮಾನ ಪಡೆದ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪೂರ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ರೂ.25,000 ಗಳನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಅತ್ಯುತ್ತಮ ಸಾಧನೆ ಮಾಡಿದ ಸ್ವ-ಸಹಾಯ ಸಂಘಗಳು: ಅತ್ಯುತ್ತಮ ಸಾಧನೆ ಮಾಡಿದ 21 ಸ್ವ-ಸಹಾಯ ಸಂಘಗಳು ಪೈಕಿ ಪ್ರಥಮ ಬಹುಮಾನ ಮಳಲಿ ಗ್ರಾಮ ಪಂಚಾಯತಿಯ ಬೀಬಿ ಫಾತೀಮ ಸ್ವ-ಸಹಾಯ ಸಂಘಕ್ಕೆ ರೂ.1,00,000 ಗಳನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ದ್ವಿತೀಯ ಬಹುಮಾನ ಪಡೆದ ಅಣ್ಣಿಗೇರಿ ತಾಲ್ಲೂಕಿನ ನಾವಳ್ಳಿ ಗ್ರಾಮ ಪಂಚಾಯತಿಯ ಶ್ರೀ ವಿಜಯಲಕ್ಷ್ಮೀ ಸ್ತ್ರೀ ಶಕ್ತಿ ಸಂಘಕ್ಕೆ ರೂ.75,000 ಗಳನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ತೃತೀಯ ಬಹುಮಾನ ಪಡೆದ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮ ಪಂಚಾಯತಿಯ ಸುಮತಿ ಸ್ವ-ಸಹಾಯ ಸಂಘಕ್ಕೆ ರೂ.50,000 ಗಳನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಎಮ್ಬಿಕೆ, ಎಲ್ಸಿಆರ್ಪಿ, ಕೆಎಸ್, ಪಿಎಸ್, ಬಿಸಿ ಸಖಿ ಸ್ವಚ್ಛ ವಾಹಿನಿ ಚಾಲಕರಿಗೆ ಹಾಗೂ ಸಹಾಯಕಿಯರಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಬಿ.ಎಸ್.ರಾಠೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಾಲೋಚಕಿ ಪದ್ಮಾವತಿ ನಾಗನಗೌಡರ ಸ್ವಾಗತಿಸಿದರು. ಗೀತಾ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ ಕಂಠಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯಯೋಜನಾಧಿಕಾರಿ ದೀಪಕ ಮಡಿವಾಳರ, ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಸಹಾಯಕ ನಿರ್ದೇಶಕರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸ್ವ-ಸಹಾಯ ಸಂಘದ ಮಹಿಳೆಯರು, ಒಕ್ಕೂಟದ ಮಹಿಳೆಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.