ಕಂಪ್ಲಿಯಲ್ಲಿ ಕೋಟಾಳ ಮಾರಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ
ಲೋಕದರ್ಶನ ವರದಿ
ಕಂಪ್ಲಿ, 26: ಪಟ್ಟಣದ 10ನೇ ವಾರ್ಷಿಕ ಸಂತೆಯ ಅಂಗವಾಗಿ ಮಾರುಕಟ್ಟೆ ಬಳಿಯಿರುವ ಶ್ರೀ ಕೋಟಾಳ ಮಾರಮ್ಮ ದೇವಿಯ ನೂತನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣದ ಹಿನ್ನೆಲೆಯಲ್ಲಿ ಮೂರ್ತಿ ಪುರ್ರವೇಶದ ಭವ್ಯ ಮೆರವಣಿಗೆ ಮಂಗಳವಾರ ಪಟ್ಟಣದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.
ಬುಕ್ಕಸಾಗರದ ಶಿಲ್ಪಿಗಾರ ವಿಶ್ವನಾಥ ಆಚಾರ್ಯ ಅವರು ದೇವಿಯ ನೂತನ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಶುಭ ಘಳಿಗೆಯಲ್ಲಿ ಬುಕ್ಕಸಾಗರದಿಂದ ತರಲಾದ ದೇವಿಯ ಮೂರ್ತಿಯನ್ನು ಕಂಪ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಭವ್ಯ ಮೆರವಣಿಗೆಯ ಮೂಲಕ ಪುರ್ರವೇಶ ಮಾಡಿಸಲಾಯಿತು.
ಮೆರವಣಿಗೆಯು ಉದ್ಭವ ಗಣೇಶ ದೇವಸ್ಥಾನ, ನಡುವಲ ಮಸೀದಿ, ಡಾ. ರಾಜಕುಮಾರ್ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ ಹಾಗೂ ಸರ್ಕಾರಿ ಆಸ್ಪತ್ರೆ ಮಾರ್ಗವಾಗಿ ಸಂತೆ ಮಾರುಕಟ್ಟೆ ಬಳಿಯಿರುವ ದೇವಾಲಯದ ಆವರಣಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾ ತಂಡ ಹಾಗೂ ಮಂಗಳವಾದ್ಯಗಳ ಪ್ರದರ್ಶನ ಗಮನಸೆಳೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಈ ಸಂದರ್ಭದಲ್ಲಿ ಮುಖ್ಯಗುರು ಈಶ್ವರ್ಪ, ಮುಖಂಡರಾದ ಮಾನ್ವಿ ರಾಮಚಂದ್ರ, ಮಾನ್ವಿ ಮಹೇಶ್, ಮೌಲಾ, ಷಣ್ಮುಖ, ಗೊಗ್ಗರಸ್ವಾಮಿ, ರಾಘವೇಂದ್ರ, ಉಮೇಶ್, ಈರಣ್ಣ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.