ಯರಗಟ್ಟಿ ವಿವಿಧೆಡೆ ಆಕರ್ಷಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ
ಯರಗಟ್ಟಿ 08: ತಾಲೂಕಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದ್ದು, ಶನಿವಾರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಅಲಂಕಾರ ಮಾಡಿ ಸಡಗರ ಸಂಭ್ರಮದಿಂದ ಗಣೇಶನನ್ನು ಬರಮಾಡಿಕೊಳ್ಳಲಾಯಿತು. ಗಣೇಶನನ್ನು ಬಾಜಾ ಭಜಂತ್ರಿಯೊಂದಿಗೆ ಪಟಾಕಿಗಳೊಂದಿಗೆ ಭಕ್ತರು ಬರಮಾಡಿಕೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು, ಭಕ್ತರು ನಾನಾ ಅವತಾರದ ಗಣೇಶ ಮೂರ್ತಿಗಳನ್ನು ನೋಡಿ ಪುನೀತರಾದರು.
ಕಣ್ಮನ ಸೆಳೆಯುವ ಮೂರ್ತಿಗಳು: ದೊಡ್ಡ ಗಣೇಶ, ಹಸುವಿನ ಮೇಲೆ ಕುಳಿತ ಗಣೇಶ, ಬಾಲರಾಮನ ರೂಪದ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ಪಂಚಮುಖಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು, ಸೂರ್ಯನಾರಾಯಣ ಗಣಪತಿ, ನಂದಿಯ ಮೇಲೆ ಕುಳಿತ ಗಣೇಶ, ಸರ್ದ ಮೇಲೆ ನಿಂತಿರುವ ಗಣೇಶ, ಪರಿಸರ ಸ್ನೇಹಿ ಗಣೇಶ, ಸಿಂಹಾಸನಾರೂಢ ಗಣೇಶ, ರೈತನ ವೇಷಧಾರಿ ಗಣೇಶ ಸೇರಿದಂತೆ ವಿವಿಧ ರೀತಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ತಾಲೂಕಿನಾದ್ಯಂತ ಪ್ರತಿಷ್ಠಾಪಿಸಲಾಗಿದ್ದು, ಜನತೆಯನ್ನು ತನ್ನತ್ತ ಸೆಳೆಯುತ್ತಿವೆ.