ಸಚಿವ ಎಚ್.ಕೆ.ಪಾಟೀಲರಿಂದ ಯಲ್ಲಮ್ಮನಗುಡ್ಡ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ
ಉಗರಗೋಳ 10: ಸಮೀಪದ ಯಲ್ಲಮ್ಮನಗುಡ್ಡಕ್ಕೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಮಂಗಳವಾರ ಭೇಟಿ ನೀಡಿ, ಇಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶೀಲಿಸಿದರು.
ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ರೂಪಿಸಿದ ಮಾಸ್ಟರ್ ಪ್ಲ್ಯಾನ್ನ ನಕ್ಷೆ ವೀಕ್ಷಿಸಿದ ಸಚಿವರು, ಈ ಪವಿತ್ರ ಧಾರ್ಮಿಕ ಸ್ಥಳದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಯಲ್ಲಮ್ಮನಗುಡ್ಡದಲ್ಲಿ ನಮ್ಮ ಇಲಾಖೆಯಿಂದ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಶಾಸಕ ವಿಶ್ವಾಸ ವೈದ್ಯ, ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಸಚಿವರ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಗುಡ್ಡದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರನ್ನು ಸನ್ಮಾನಿಸಲಾಯಿತು.
ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, ಅಧೀಕ್ಷಕ ಅರವಿಂದ ಮಾಳಗೆ, ಸವದತ್ತಿ ಸಿಪಿಐ ಜೆ.ಕರುಣೇಶಗೌಡ, ಕಾಂಗ್ರೆಸ್ ಮುಖಂಡ ಮಲ್ಲು ಜಕಾತಿ, ಎಸ್.ಆರ್.ಪಾಟೀಲ ಇತರರಿದ್ದರು.