ರೈತರ ಜಮೀನುಗಳಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ
ಹೂವಿನಹಡಗಲಿ 13: ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಎದುರು ರೈತ ಸಾಮೂಹಿಕ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ ರಾಜ್ಯದಲ್ಲೇ ನೀರಾವರಿ ಯೋಜನೆಗಳಲ್ಲಿ ಕೋಟಿ ಹಣ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ.ಕಳೆದ 20ವರ್ಷಗಳಿಂದ ರೈತರು ಪರಿಹಾರಕ್ಕೆ ಅಲೆದಾಡುತ್ತಿದ್ದಾರೆ. ಇತ್ತ ಶಾಸಕ ಪಿಟ.ಪರಮೇಶ್ವರನಾಯ್ಕ ರೈತರ ಬಗ್ಗೆ ಸ್ಪಂದಿಸುತ್ತಿಲ್ಲ ಎಂದ ಅವರು ಕೂಡಲೇ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರು ಮತ್ತು ಬಲದಂಡೆ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಇಲ್ಲಿನ ವಿಶೇಷ ಭೂಸ್ವಾಧಿನಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲದೇ ರೈತರಿಗೆ ನೀಡಬೇಕಾದ ಪರಿಹಾರದ ಕಡತಗಳನ್ನು ವಿಲೇವಾರಿ ಆಗುತ್ತಿಲ್ಲ,ಸರ್ಕಾರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಎಸ್ ಸಂಚಾಲಕ ಸುರೇಶ ಹಲಗಿ ಮಾತನಾಡಿ ಭೂಮಿ ಪರಿಹಾರಕ್ಕೆ ನಡೆಯುತ್ತಿರುವ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ.ಬುಧವಾರ ರೈತರು ಕುಟುಂಬ ಸಮೇತ ಪ್ರತಿಭಟನೆಯಲ್ಲಿ ಭಾಗವಹಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ತಹಶೀಲ್ದಾರರು ಕೂಡಲೇ ಸಮಸ್ಯೆ ಇತ್ಯಾರ್ಥ ಪಡಿಸಬೇಕು ಇಲ್ಲದಿದ್ದರೇ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಸಂಚಾಲಕ ಶಾಂತರಾಜ ಜೈನ್, ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಎನ್.ಎಂ.ಸಿದ್ದೇಶ, ಎಐಕೆಎಸ್ ಮುಕುಂದಗೌಡ, ಜೆಡಿಎಸ್ ಮುಖಂಡ ಪುತ್ರೇಶ, ಎಸ್.ಎಂ.ಶಿವಲಿಂಗಯ್ಯ ಸೇರಿದಂತೆ ಅಂಗೂರು, ಹೊಸಹಳ್ಳಿ ಗ್ರಾಮಗಳ ರೈತರು ಭಾಗವಹಿಸಿದ್ದರು.