ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ: ಸರಿಪಡಿಸಲು ಮನವಿ
ಬೈಲಹೊಂಗಲ 16: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ನೇಗಿಲ ಯೋಗಿ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಘಟಕ ಅಧ್ಯಕ್ಷ ಈರಪ್ಪ ಉಳ್ಳಿಗೇರಿ ಮಾತನಾಡಿ, ನೇಗಿಲಯೋಗಿ ರೈತ ಸೇವಾ ಸಂಘ ಖಾಸಗಿ ಮಾರುಕಟ್ಟೆಗಳನ್ನು ಎಂದೂ ಬೆಂಬಲಿಸಿಲ್ಲ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಖಾನಾಪೂರ, ಕಿತ್ತೂರ, ಧಾರವಾಡ, ಬೈಲಹೊಂಗಲ, ಸವದತ್ತಿ ತಾಲೂಕಿನಿಂದ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಸಾಗಾಣಿಕೆ ಮಾಡಲಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರಿಗೆ ಲಾಭದಾಯಕ ದರ, ಸಾಗಾಣಿಕೆ ಸುಲಭವಾಗಿ ತರುವ ಕಾರಣಕ್ಕೆ ಹೊಸ ಕಾಯಿಪಲ್ಲೆ ಮಾರುಕಟ್ಟೆ ಅವಶ್ಯವಿದೆ. ಕೂಡಲೇ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಾದ ಸುರೇಶ ವಾಲಿ, ಈರಣ್ಣಾ ಜವಳಿ, ಸಿದ್ದಣ್ಣ ಭದ್ರಶೆಟ್ಟಿ, ಕಲ್ಲಪ್ಪ ಹರಿಯಾಳ, ವೀರಭದ್ರ ನಾಯ್ಕರ, ಗಿರಿಧರ ಜಗತಾಫ, ಈರ್ಪ ಇಂಗಳಗಿ, ದೀಪಕ ಜಗತಾಫ, ಸಂಜಯ ನಿಂಬಾಳ್ಕರ, ಮಹಾಬಳೇಶ್ವರ ನಿಂಬಾಳ್ಕರ ಇದ್ದರು.