ಇಂದೂರ ಗ್ರಾ.ಪಂ ಕಂಟೈನ್ಮೆಂಟ್ ವಲಯ ಸಂಪೂರ್ಣ ಸೀಲ್ಡೌನ್
ಮುಂಡಗೋಡ: 40 ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ಹೊಂದಿರುವ ತಾಲೂಕಿನ ಇಂದೂರ ಗ್ರಾ.ಪಂನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ ಇಂದೂರ ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಣಕ್ಕೆ ತರಲು ಮತ್ತಷ್ಟು ಕಠಿಣ ಕ್ರಮ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣವಿರುವ ಗ್ರಾ.ಪಂ ಗಳನ್ನು ಕಂಟೈನ್ಮೆಂಟ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ತಾಲೂಕಿನಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿರುವ ಇಂದೂರ ಗ್ರಾ.ಪಂ ನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿ ಯಾವುದೇ ಕಾರಣಕ್ಕೂ ಗ್ರಾಮಸ್ಥರು ಹೊರಗೆ ಬರಬಾರದು ಹಾಗೂ ಹೊರಗಿನವರು ಕೂಡ ಈ ಗ್ರಾಮ ಪ್ರವೇಶಿಸಬಾರದೆಂದು ಮುಂಡಗೋಡ ತಹಸೀಲ್ದಾರ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದ ಮನೆ ಮನೆಗೆ ತೆರಳಿ ಕುಟುಂಬಸ್ಥರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮುಂಜಾಗೃತೆ ವಹಿಸುವಂತೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.