ರಾಷ್ಟ್ರೀಯ

ಆರೋಗ್ಯ ಕ್ಷೇತ್ರದ ನಾವೀನ್ಯತೆಯಲ್ಲಿ ಭಾರತ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ: ದೆಹಲಿ ಎಲ್‌ಜಿ

ಆರೋಗ್ಯ ಕ್ಷೇತ್ರದ ನಾವೀನ್ಯತೆಯಲ್ಲಿ ಭಾರತ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ: ದೆಹಲಿ ಎಲ್‌ಜಿ
ನವದೆಹಲಿ, ನ. 21 : ಕೃತಕ ಬುದ್ಧಿಮತ್ತೆ (ಎಐ), ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಮತ್ತು ದೇಶೀಯ ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ರೋಗಿಗಳ ಚಿಕಿತ್ಸೆಯಲ್ಲಿ ಬದಲಾವಣೆ ಆಗುತ್ತಿದೆ. ಈ ಬೆಳವಣಿಗೆಗಳೊಂದಿಗೆ ಭಾರತ ಆರೋಗ್ಯ ಕ್ಷೇತ್ರದ ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಟಿ. ಎಸ್. ಸಂಧು ಶನಿವಾರ ಹೇಳಿದರು.

ದ್ವಾರಕಾದ ಯಶೋಭೂಮಿಯಲ್ಲಿ ನಡೆದ ‘SMICTSI-ATCSA-ICC-ISMICS 2026’ ಅಂತರರಾಷ್ಟ್ರೀಯ ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಧಾರಿತ ಚಿಕಿತ್ಸೆ ಮತ್ತು ತಂತ್ರಜ್ಞಾನ ದೇಶದಾದ್ಯಂತ ರೋಗಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಲಭ್ಯವಾದಾಗಲೇ ವೈದ್ಯಕೀಯ ನಾವೀನ್ಯತೆಯ ನಿಜವಾದ ಯಶಸ್ಸು ಸಾಧ್ಯ ಎಂದರು.

‘ಹೃದಯ ಮತ್ತು ಎದೆಗೂಡು ಚಿಕಿತ್ಸೆಗೆ ಹೊಸ ದಿಕ್ಕು: ಜಾಗತಿಕ ಪ್ರವೃತ್ತಿಗಳು ಮತ್ತು ಪರಿವರ್ತನಕಾರಿ ತಂತ್ರಜ್ಞಾನಗಳು’ ಎಂಬ ವಿಷಯದಡಿ ನಡೆದ ಸಮ್ಮೇಳನದಲ್ಲಿ ಭಾರತ ಹಾಗೂ ವಿದೇಶಗಳ ಶಸ್ತ್ರಚಿಕಿತ್ಸಕರು, ಸಂಶೋಧಕರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮ್ಮೇಳನದ ಮುಖ್ಯ ಆಶ್ರಯದಾತ ಡಾ. ನರೇಶ್ ತ್ರೇಹಾನ್ ಮತ್ತು ಸಂಘಟನಾ ಸಮಿತಿ ಅಧ್ಯಕ್ಷ ಡಾ. ಯುಗಲ್ ಕೆ. ಮಿಶ್ರಾ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಣ್ಣ ಛೇದನದ ಮೂಲಕ ಮಾಡುವ ಶಸ್ತ್ರಚಿಕಿತ್ಸೆ, ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಮತ್ತು ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳಿಂದ ಚಿಕಿತ್ಸೆಯ ಆಯ್ಕೆಗಳು ಹೆಚ್ಚಿವೆ ಹಾಗೂ ಶಸ್ತ್ರಚಿಕಿತ್ಸೆಯ ನಿಖರತೆ ಸುಧಾರಿಸಿದೆ ಎಂದು ಸಂಧು ಹೇಳಿದರು. ಈ ವಿಧಾನಗಳಿಂದ ರೋಗಿಗಳ ದೇಹದ ಮೇಲಿನ ಒತ್ತಡ ಕಡಿಮೆಯಾಗಿದ್ದು, ಕೆಲವರು ಬೇಗ ಚೇತರಿಸಿಕೊಳ್ಳಲು ನೆರವಾಗಿದೆ ಎಂದರು. ಸಂಶೋಧನಾ ಫಲಿತಾಂಶಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಹಂಚಿಕೊಳ್ಳಲು ವಿವಿಧ ದೇಶಗಳು ಹಾಗೂ ಸಂಸ್ಥೆಗಳ ನಡುವೆ ಹೆಚ್ಚಿನ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಸಂಧು ಅವರು ದೇಶದಲ್ಲಿ ಅಭಿವೃದ್ಧಿಪಡಿಸಿದ ಎಐ ಆಧಾರಿತ ವೈದ್ಯಕೀಯ ತಂತ್ರಜ್ಞಾನಗಳು, ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಮತ್ತು ಇತರ ಸಾಧನಗಳ ಪ್ರದರ್ಶನವನ್ನೂ ವೀಕ್ಷಿಸಿದರು. ಭಾರತೀಯ ವೈದ್ಯರು ಅಭಿವೃದ್ಧಿಪಡಿಸಿ ಬಳಸುತ್ತಿರುವ ರೋಬೋಟಿಕ್ ಶಸ್ತ್ರಚಿಕಿತ್ಸಾ ಕುರ್ಚಿಯೂ ಪ್ರದರ್ಶನದಲ್ಲಿತ್ತು.

ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನಾ ಪಾರ್ಕ್‌ಗಳು ದೇಶೀಯ ತಯಾರಿಕೆಗೆ ಬೆಂಬಲ ನೀಡುತ್ತಿವೆ ಎಂದು ಸಂಧು ಹೇಳಿದರು. ದೇಶೀಯ ವೈದ್ಯಕೀಯ ಸಾಧನ ಉದ್ಯಮ ಬಲಗೊಂಡರೆ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಸುಧಾರಿತ ಉಪಕರಣಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿವೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಣೆ ಮತ್ತು ಗುಣಮಟ್ಟದ ಚಿಕಿತ್ಸೆಯ ಲಭ್ಯತೆ ಹೆಚ್ಚಿಸಲು ಕೈಗೊಂಡ ಪ್ರಯತ್ನಗಳನ್ನೂ ಅವರು ಉಲ್ಲೇಖಿಸಿದರು.

ದೆಹಲಿಯ ಪ್ರಮುಖ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಉಲ್ಲೇಖಿಸಿದ ಸಂಧು, ಇಂತಹ ಅಂತರರಾಷ್ಟ್ರೀಯ ಸಮ್ಮೇಳನಗಳು ಶೈಕ್ಷಣಿಕ ಸಹಭಾಗಿತ್ವ ಬೆಳೆಸಲು ಹಾಗೂ ವೈದ್ಯಕೀಯ ತಂತ್ರಜ್ಞಾನ ವಿನಿಮಯಕ್ಕೆ ನೆರವಾಗುತ್ತವೆ ಎಂದರು. ಹೊಸ ತಂತ್ರಜ್ಞಾನ ಬಳಸುವಾಗ ವೈದ್ಯಕೀಯ ವಿವೇಚನೆ, ವೃತ್ತಿಪರ ನೈತಿಕತೆ ಮತ್ತು ರೋಗಿಗಳ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಅವರು ಕರೆ ನೀಡಿದರು.

ಸುದ್ದಿ ಓದಿ