ಸ್ವಾತಂತ್ರ್ಯ ಧ್ವಜಾರೋಹಣ ಯುದ್ಧಭೂಮಿ ಯೋಧರಿಗೆ ಪುಣ್ಯಭೂಮಿ: ಚಂದ್ರಶೇಖರ
ರಾಣೆಬೆನ್ನೂರು 17: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಬಹುದೊಡ್ಡ ಇತಿಹಾಸ. ದಕ್ಕಿರುವ ಸ್ವಾತಂತ್ರ್ಯವನ್ನು ಇಂದು ಉಳಿಸಿಕೊಂಡು ಹೋಗುವುದು ದೊಡ್ಡ ಸಾಹಸದ ಕೆಲಸವಾಗಿದೆ ಎಂದು ಸಿ. ಆರ್. ಪಿ. ಎಫ್ ನಿವೃತ್ತ ಯೋಧ ಚಂದ್ರಶೇಖರ ಲಮಾಣಿ ವಿಷಾದಿಸಿದರು. ಅವರು ಆಗಸ್ಟ್ 15ರಂದು ಸೋಮವಾರ ನಗರ ಹೊರವಲಯದ ದೆಹಲಿ ಸೆಂಟ್ರಲ್ ಶಾಲಾ (ಸಿಬಿಎಸ್ಸಿ )ಆವರಣದಲ್ಲಿ ನಡೆದ, 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ದೇಶ ಸ್ವಾತಂತ್ರ್ಯ ಪಡೆದಿರುವುದೇನೋ ನಿಜ.
ಸರ್ವರಿಗೂ ಸಮಾನತೆಯ ಬದುಕು ಸಿಕ್ಕಿದೆಯೇ ಎನ್ನುವ ಪ್ರಶ್ನೆ ಭಾರತೀಯರಲ್ಲಿ ಎದ್ದು ಕಾಡುತ್ತಿದೆ. ಯೋಧರು ದೇಶವನ್ನು ಕಾಯುವ ಕಾಯಕದಲ್ಲಿ ನಿರತರಾಗಿದ್ದಾರೆ, ಆದರೆ ದೇಶದ ಜನರನ್ನು ರಕ್ಷಣೆ ಮಾಡಬೇಕಾದವರು ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿಯದಂತಾಗಿದೆ ಎಂದು ವಿಷಾದಿಸಿದರು. ಭಾರತೀಯರು ವಿವಿಧ ದೇಶ,ಭಾಷೆ, ಜಾತಿ, ಮತ, ಪಂಥ ಯಾವುದನ್ನು ಕಡೆಗಣಿಸದೆ ಬದುಕಿ ಬಾಳುತ್ತಿದ್ದೇವೆ, ಪ್ರಸ್ತುತ ದೇಶದಲ್ಲಿ ಜಾತಿ- ಮತಗಳ ಹೆಸರಿನಲ್ಲಿ, ಕೋಮು ಗಲಭೆಗಳು ನಡೆಯುತ್ತಿರುವುದನ್ನು ನೋಡಿದರೆ. ಭವಿಷ್ಯದ ದಿನಗಳಲ್ಲಿ ಭಾವೈಕ್ಯತೆಯ ಭಾರತದ ಗತಿ ಏನು ಎನ್ನುವಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯುದ್ಧಭೂಮಿಯಲ್ಲಿ ನಡೆಯುವ ಯುದ್ಧ ವಿದ್ಯಮಾನಗಳ ಕುರಿತಂತೆ ಸಾವಿರಾರು ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ನೀಡುವುದರ ಮೂಲಕ ದೇಶಾಭಿಮಾನ ಮೂಡಿಸಿದರು. ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು, ವಿತರಿಸಲಾಯಿತು. ಯುದ್ಧಭೂಮಿಗೆ ಸನ್ನದ್ಧರಾಗುತ್ತಿರುವ 20 ಜವಾ ನರನ್ನು, ಆಡಳಿತದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮತ್ತೋರ್ವ ಯೋಧ ಶ್ರೀಕಾಂತ್ ಲಮಾಣಿ ಅವರು ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರ ಕುರಿತಂತೆ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೊಗಟವೀರ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಂಜುನಾಥ ತೊಗಟವೀರ, ಪ್ರಾಚಾರ್ಯ ಆನಂದಿ ಭಟ್, ಶಾಲಾ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ನಂತರ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು