ಕಾರವಾರ

ಸಂಸ್ಕೃತಿ ಬದಲಾವಣೆಯನ್ನು ಬಯಸಲ್ಲ : ನಾಗರಿಕತೆ ಬದಲಾವಣೆಯ ಮುಖ ಹೊಂದಿದೆ - ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅಭಿಪ್ರಾಯ

ಸಂಸ್ಕೃತಿ ಬದಲಾವಣೆಯನ್ನು ಬಯಸಲ್ಲ : ನಾಗರಿಕತೆ ಬದಲಾವಣೆಯ ಮುಖ ಹೊಂದಿದೆ - ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅಭಿಪ್ರಾಯ
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾತನಾಡಿದರು.

ಕಾರವಾರ 14: ಸಂಸ್ಕೃತಿ ಬದಲಾವಣೆಯನ್ನು ಬಯಸಲ್ಲ. ಅದು ಇದ್ದಕ್ಕಿದ್ದ ಹಾಗೆ ಇರಲು ಬಯಸುತ್ತದೆ. ಆದರೆ ನಾಗರಿಕತೆ ಬದಲಾವಣೆಯನ್ನು, ಅಭಿವೃದ್ಧಿಯನ್ನು ಬಯಸುತ್ತದೆ. ನಾಗರಿಕತೆಗೆ ಬದಲಾವಣೆಯ ತುಡಿತ ಇರುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. 

ಅವರು ಶನಿವಾರ  ನಗರದ ಶಿವಾಜಿ ಶಿಕ್ಷಣ  ಮಹಾವಿದ್ಯಾಲಯದಲ್ಲಿ ನಡೆದ  75 ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ  ಆಗಮಿಸಿ ಮಾತನಾಡಿದರು. ಈ ದೇಶ ಅಂತ್ಯದ ಪ್ರಾಚೀನವಾದ ದೇಶ. ಪ್ರಾಚೀನ ಸಂಸ್ಕೃತಿಯನ್ನ ಹೊಂದಿದ್ದಂತಹ ದೇಶ. ಒಳ್ಳೆಯ ಅಚಾರಗಳನ್ನು ಹಾಗೂ  ಮೂಢ ನಂಬಿಕೆಗಳನ್ನು ಹೊಂದಿರುವ ದೇಶ. ನಮ್ಮಲ್ಲಿರುವ ಸಂಸ್ಕೃತಿ, ಉಡುಗೆ,ತೊಡುಗೆಗಳು ಇಂದು ನಮ್ಮ ದೇಶವನ್ನ ಗಟ್ಟಿಯಾಗಿಸಿವೆ ಎಂದರು.  ಕಾರ್ಯಕ್ರಮದಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟು ಬಂದಿದ್ದ ವಿದ್ಯಾರ್ಥಿಗಳನ್ನು  ಉದ್ದೇಶಿಸಿದ ಅವರು ವಿವಿಧ ಕಾಲದ ದೇಶೀಯ ಉಡುಗೆ ತೊಡುಗೆ ತೊಟ್ಟಿದ್ದೀರಿ. ಇದನ್ನು ಸಂಸ್ಕೃತಿ ಎನ್ನಬೇಕೇ ಅಥವಾ ನಾಗರಿಕತೆ ಎನ್ನಬೇಕೆ ? ಎಂದು ಪ್ರಶ್ನಿಸಿದ ಅವರು ಇದರ ಹಿಂದೆ ಒಳ್ಳೆಯ ಅಂಕಗಳಿಸುವ ಸ್ವಾರ್ಥವಿದೆ. ನೌಕರಿಗಾಗಿ ಹೆಚ್ಚಿನ ಅಂಕಗಳು ಬೇಕು. ಶೈಕ್ಷಣಿಕ ಬೆಳವಣಿಗೆಗೆ ಬೇಕು.  ಉಡುಗೆ ತೊಡುಗೆಯ ಹಿಂದೆ ಒಂದು ಉದ್ದೇಶವಿದೆ. ಒಳ್ಳೆಯ ಸ್ವಾರ್ಥ ಸಹ ಒಳ್ಳೆಯದೇ. ಜಾತಿ ಧರ್ಮಗಳ ಸಮಾಗಮವನ್ನು ಮಾಡಿದ್ದೀರಿ. ಇದೇ ಈ ದೇಶದ ಒಂದು ನಂಬಿಕೆ. ಸಂಸ್ಕೃತಿ. ಶ್ರೀಮಂತಿಕೆ. ತಾತ್ವಿಕತೆ. ಇದು ಒಳ್ಳೆಯದೋ, ಕೆಟ್ಟದ್ದೋ ಗೊತ್ತಿಲ್ಲ. ಇದನ್ನು ಸಂಸ್ಕೃತಿಯನ್ನಲ್ಲ. ಇದನ್ನು ನಾಗರಿಕತೆ ಎನ್ನಬಹುದು. ಸಂಸ್ಕೃತಿಗೆ ಧೈರ್ಯ ಇರಲ್ಲ. ನಾಗರಿಕತೆಗೆ ಧೈರ್ಯವಿದೆ. ಹಿಂದೆ ಹರಿದ ಪ್ಯಾಂಟ್ ಹಾಕಲು ನನಗೆ ಅವಮಾನವಾಗುತ್ತಿತ್ತು. ಈಗ ಹರಿದ ಪ್ಯಾಂಟ್ ಹಾಕುವುದು ಫ್ಯಾಶನ್ . ಇವತ್ತು ಹರಿದ ಪ್ಯಾಂಟ್ ಹಾಕಿಕೊಂಡ ಮಾತ್ರಕ್ಕೆ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸಲು ಆಗಲ್ಲ. ಹಾಗಾಗಿ ಆಧುನಿಕ ನಾಗರಿಕತೆ ವೈಚಾರಿಕತೆಯನ್ನು ಸಹ ಈ ಸಮಾಜಕ್ಕೆ ನೀಡಿದೆ. ಇವತ್ತು ಗ್ರಹಿಕೆ ಬಹುಮುಖ್ಯವಾಗಿದೆ. ವೈಜ್ಞಾನ ಮತ್ತು ವೈಚಾರಿಕತೆಯನ್ನು ನಾವು ಬಳಸಿಕೊಳ್ಳುವುದರ ಮೇಲೆ ನಾಗರಿಕತೆಯ ಬದಲಾವಣೆ , ಅಭಿವೃದ್ಧಿಯ ಮುಖಗಳು ನಿಂತಿವೆ ಎಂದರು.  

ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯಲ್ಲಿ ಯುವಕರು ಸ್ವಯಂ ಉದ್ಯೋಗ ಮತ್ತು ಕೃಷಿಯ ಜೊತೆಯೆ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಿವಾನಂದ ನಾಯ್ಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಜವಾದ ದೇಶಪ್ರೇಮ ಅರಿಯಲು ಇತಿಹಾಸವನ್ನು ಸರಿಯಾಗಿ ಗ್ರಹಿಸಬೇಕು ಮತ್ತು ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಜೀವನವನ್ನು ತಿಳಿದುಕೊಳ್ಳಬೇಕು ಎಂದರು. ಬಿಎಡ್ ವಿದ್ಯಾರ್ಥಿಗಳು ಸಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದರು. ಉಪನ್ಯಾಸಕರಾದ ನವೀನ ಸ್ವಾಗತಿಸಿದರು. ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಸುದ್ದಿ ಓದಿ