ಶಿಗ್ಗಾವ್

ಕಿವುಡ-ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿ ಸ್ವಾತಂತ್ರ್ಯೊತ್ಸವ ದಿನಾಚರಣೆ

ಕಿವುಡ-ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿ ಸ್ವಾತಂತ್ರ್ಯೊತ್ಸವ ದಿನಾಚರಣೆ

ಲೋಕದರ್ಶನ ವರದಿ

ಶಿಗ್ಗಾವಿ 16: ನಮ್ಮ ದೇಶಕ್ಕಂಟಿದ ಶಾಪವಾಗಿರುವ ಉಗ್ರವಾದವನ್ನು ಹತ್ತಿಕ್ಕುವ ಮೂಲಕ ಸಭಲ ರಾಷ್ಟ್ರ ಕಟ್ಟುವ ಕೈಂಕರ್ಯದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪ್ರಯತ್ನಿಸಬೇಕಿದೆ. ಭಾರತದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿ ಹಿಡಿದ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಕ್ರಮವನ್ನು ಎಲ್ಲ ಭಾರತೀಯರು ಬೆಂಬಲಿಸಬೇಕಾಗಿದೆ ಎಂದು ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜು ಎಂ. ಕುನ್ನೂರ ಹೇಳಿದರು. 

ಪಟ್ಟಣದ ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ, ಚನ್ನಪ್ಪ ಕುನ್ನೂರ ಕನ್ನಡ ಮಾದ್ಯಮ ಶಾಲೆ ಹಾಗೂ ಕಿವುಡ-ಮೂಕ ಮಕ್ಕಳ ವಸತಿಯುತ ಶಾಲೆಗಳ ಆಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ದೇಶ ಇಡಿ ವಿಶ್ವಕ್ಕೆ ಮಾನ್ಯವಾಗಬಹುದಾದ ಶ್ರೇಷ್ಠತೆಯನ್ನು ಹೊಂದಿದೆ. ಆದರೆ ಕೆಲವು ದುಷ್ಟ ಶಕ್ತಿಗಳು ಹುಟ್ಟು ಹಾಕುತ್ತಿರುವ ಭಯೋತ್ಪಾದನೆಯಿಂದ ದೇಶದ ಸಮಗ್ರತೆಗೆ ತೊಂದರೆಯಾಗುತ್ತಿದ್ದು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಿನಿಂದ ಇಂಥ ದುಷ್ಟ ಶಕ್ತಿಗಳ ದಮನಕ್ಕೆ ಮುಂದಾಗುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಒಂದು ದೇಶ ಒಂದು ಕಾನೂನು ಮೂಲಕ ದೇಶದಲ್ಲಿ ಸಮಾನತೆಯನ್ನು ಸಾಧಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ. ಟಿ. ಪಾಟೀಲ, ಕಿವುಡ-ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಂ. ಬಿ. ನೀರಲಗಿ  ಮುಂತಾದವರು ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ದೈಹಿಕ ಶಿಕ್ಷಕ ಎಂ. ಎನ್. ಪ್ರಕಾಶ ಸ್ವಾಗತಿಸಿದರು. ಶಿಕ್ಷಕ ಎಂ. ಎ. ಗಾಣಿಗೇರ ವಂದಿಸಿದರು, ಶಿಕ್ಷಕಿ ಆರ್, ವ್ಹಿ. ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು 

ಸುದ್ದಿ ಓದಿ