ವಿಜಯಪುರ

ರೈತರನ್ನು ಐಸಿಸಿ ಸಮಿತಿಗೆ ಸೇರಿಸಿ: ಅಖಂಡ ಕರ್ನಾಟಕ ರೈತ ಸಂಘ ಆಗ್ರಹ

ರೈತರನ್ನು ಐಸಿಸಿ ಸಮಿತಿಗೆ ಸೇರಿಸಿ: ಅಖಂಡ ಕರ್ನಾಟಕ ರೈತ ಸಂಘ ಆಗ್ರಹ

ಲೋಕದರ್ಶನ ವರದಿ 

ವಿಜಯಪುರ 25: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಸಮರ​‍್ಕ ಪ್ರಮಾಣದಲ್ಲಿ ನೀರು ಒದಗಿಸಬೇಕು.

ಜೊತೆಗೆ ಐಸಿಸಿ ಸಮಿತಿಯಲ್ಲಿ ರೈತರಿಗೆ ಪ್ರತಿನಿಧಿತ್ವ ನೀಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿದೆ.  ಈ ಕುರಿತು ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.  

ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸಿದ್ದಾಪೂರ ಮಾತನಾಡಿ, ಇದುವರೆಗೆ ಐಸಿಸಿ ಸಮಿತಿ ರಚನೆಯಾಗಿಲ್ಲ. ಈಗ ಸರ್ಕಾರ ಸಮಿತಿ ರಚಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.   

ಬೆಳೆಗಳ ಸ್ವರೂಪ, ನೀರಿನ ಅವಶ್ಯಕತೆ ಹಾಗೂ ನೀರು ಬಿಡುವ ಅವಧಿಯ ಬಗ್ಗೆ ರೈತರಿಗೆ ಸಮಗ್ರ ಅನುಭವವಿರುವುದರಿಂದ ಐಸಿಸಿ ಸಮಿತಿಯಲ್ಲಿ ಅವರ ಪ್ರತಿನಿಧಿತ್ವ ಅತ್ಯಗತ್ಯವಾಗಿದೆ. ರೈತರ ಅಭಿಪ್ರಾಯದ ಆಧಾರದ ಮೇಲೆ ನೀರಿನ ಹಂಚಿಕೆ ಮಾಡಿದರೆ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.  

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಾವಿರಾರು ರೈತರು ನೀರಾವರಿ ಯೋಜನೆಗಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು.  

ನೀರಾವರಿ ಕಾಲುವೆಗಳ ಕೊನೆಯ ಭಾಗದ (ಟೇಲ್‌-ಎಂಡ್) ರೈತರಿಗೂ ಸಮರ​‍್ಕವಾಗಿ ನೀರು ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ರೈತನಿಗೆ ನೀರಾವರಿ ಸೌಲಭ್ಯದಿಂದ ವಂಚನೆಯಾಗಬಾರದು ಎಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಚ್‌.ಟಿ. ಭರತಕುಮಾರ, ಭೋಗೇಶ್ ಸೋಲಾಪುರ, ಗೈಬೂಸಾಬ್ ಬಂಡರಗೋಠೆ, ಗುರುರಾಜ ಪಡಶೆಟ್ಟಿ, ಪಾಂಡು ಹಟ್ಟಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರು ಉಪಸ್ಥಿತರಿದ್ದರು.  


ಸುದ್ದಿ ಓದಿ