ತಾಳಿಕೋಟಿ

ಸಂಗೊಳ್ಳಿ ರಾಯಣ್ಣ ಗ್ರಾಮೀಣ ಸಂತೆ ಉದ್ಘಾಟನೆ

ಸಂಗೊಳ್ಳಿ ರಾಯಣ್ಣ ಗ್ರಾಮೀಣ ಸಂತೆ ಉದ್ಘಾಟನೆ

ತಾಳಿಕೋಟೆ 31: ಗ್ರಾಮೀಣ ಭಾಗದಲ್ಲಿ ಸಂತೆ ಆರಂಭವಾಗಿದ್ದರಿಂದ ದಲ್ಲಾಳಿಗಳ ಕಾಟವಿಲ್ಲದೇ ರೈತರ ನೇರವಾಗಿ ತಮ್ಮ ತರಕಾರಿಯನ್ನು ಮಾರಾಟ ಮಾಡಬಹುದಾಗಿದೆ, ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ಲಾಭವಾಗಲಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌.ಬಿರಾದಾರ ಹೇಳಿದರು. 

ಅವರು ತಾಲೂಕಿನ ಪಿರಾಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಗ್ರಾಮ ಪಂಚಾಯತ ಭಂಟನೂರ ಸಂಯುಕ್ತಾಶ್ರಯದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಸಂತೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಗ್ರಾಮೀಣ ಭಾಗದ ಜನರಿಗೆ ಅನುಕೂಲಕ್ಕಾಗಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಸಂತೆಗೆ 80/40 ಪುಟ ಜಾಗವನ್ನು ದಾನವಾಗಿ ನೀಡಿದ್ದಾರೆ. ಪ್ರತಿ ಶುಕ್ರವಾರ ಸಂತೆ ನಡೆಯುವುದು. ಇದರಿಂದ ಸುಮಾರು ಹತ್ತಕ್ಕೂ ಅಧಿಕ ಹಳ್ಳಿಗಳಿಗೆ ಲಾಭವಾಗಲಿದೆ. ಸಂತೆ ಆರಂಭಿಸುವಲ್ಲಿ ಪಾತ್ರ ದೊಡ್ಡದಿದೆ ಎಂದರು. 

ಕೆಪಿಸಿಸಿ ಸದಸ್ಯ ಬಿ.ಎಸ್‌.ಪಾಟೀಲ(ಯಾಳಗಿ) ಮಾತನಾಡಿ,ಪೀರಾಪುರ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿಯನ್ನು ಸರ್ಕಾರಿ ಪ್ರೌಢಶಾಲೆಗೆ ದಾನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅದೇ ರೀತಿ ಇನ್ನೋರ್ವ ದಾನಿಗಳು ಸಂತೆಗೆ ಜಾಗ ನೀಡುವ ಮೂಲಕ ಜನರ ಪ್ರೀತಿ ಪಾತ್ರರಾಗಿದ್ದಾರೆ. ರೈತರು ತಾವು ಬೆಳೆದ ಕಾಯಿಪಲ್ಲೆ ದಲ್ಲಾಳಿಗಳ ಹಾವಳಿ ಇಲ್ಲದೇ ಸ್ವಂತ  ತಾವೇ ಮಾರ ಬಹುದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಎಪಿಎಂಸಿ ಸದಸ್ಯ ಸುರೇಶಬಾಬುಗೌಡ ಬಿರಾದಾರ ಮಾತನಾಡಿದರು. ಸಾನಿಧ್ಯವನ್ನು ಖಾಸ್ಗತೇಶ್ವರ ಮಠಧ ಪಿಠಾಧಿಪತಿ ಸಿದ್ದಲಿಂಗ ದೇವರು, ಸರೂರ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 

ಗ್ರಾಪಂ ಅಧ್ಯಕ್ಷೆ ಚನ್ನಮ್ಮ ವಾಲೀಕರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಯಪ್ಪಗೌಡ ಪಾಟೀಲ, ಎಂ.ಜಿ.ಪಾಟೀಲ, ಅರವಿಂದ ಹಾಲಣ್ಣವರ, ಸಾಯಬಣ್ಣ ಅಲ್ಯಾಳ, ನಿಂಗನಗೌಡ ತುಂಬಗಿ, ಬಿಜಾನಲಿ ನೀರಲಗಿ, ಡಾ.ಬಲವಂತರಾಯ ನಡಹಳ್ಳಿ, ಎಚ್‌.ಬಿ.ಬಿರಾದಾರ, ಮಲ್ಲನಗೌಡ ಆನೇಸುರ, ತಿಪ್ಪಣ್ಣ ಸರೂರ, ಶಂಕರಗೌಡ ದೇಸಾಯಿ, ಸಾಹೇಬಗೌಡ ಬಸರೆಡ್ಡಿ, ಪಿಡಿಓ ಸುರೇಶ ದಳವಾಯಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ