ಹಾವೇರಿ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹಾವೇರಿ 23: ಸಮಾನ ಉದ್ದೇಶಗಳಿಗಾಗಿ ರಚನೆಯಾಗುವ ಸಂಘಟನೆಗಳಲ್ಲಿ ಅಪಾರವಾದ ಶಕ್ತಿ ಅಡಗಿರುತ್ತದೆ. ಅದರ ಕಾರ್ಯ ಸ್ವಹಿತಾಸಕ್ತಿ ರಕ್ಷಣೆಗಾಗಿ ಹೋರಾಡುವದಷ್ಟೇ ಅಲ್ಲದೇ ವಿವಿಧ ಸಮಾಜಮುಖಿ ಸೇವೆಗಳತ್ತಲೂ ವಿಸ್ತರಣೆಯಾಗುವ ಅವಶ್ಯಕತೆ ಇದೆ. ಅದರಲ್ಲೂ ಶಿಕ್ಷಕರ, ಉಪನ್ಯಾಸಕರ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿವೆ. ಇದರ ಜೊತೆಗೆ ಸಮಾಜ ಸೇವಾ  ಕಾರ್ಯಗಳತ್ತಲೂ ಮುಖ ಮಾಡಿ ಸಮಾಜದ ಋಣವನ್ನು ತೀರಿಸುವ ಪವಿತ್ರ ಕೆಲಸವನ್ನ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಸತೀಶ ಕುಲಕರ್ಣಿ ಕರೆ ಕೊಟ್ಟರು. 

ನಗರದ ಆಕ್ಸ್‌ಫರ್ಡ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ, ಹಾವೇರಿ ಜಿಲ್ಲಾ ಘಟಕದ ವತಿಯಿಂದ ಸಂಘದ ಹಾವೇರಿ ತಾಲೂಕಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 

ಮುಂಚೂಣಿಯಲ್ಲಿರುವ ಪದಾಧಿಕಾರಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು.ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು.ಮಕ್ಕಳ ಭವಿಷ್ಯವನ್ನು ಬೆಳಗುವುದರ ಜೊತೆಗೆ ಸಮಾಜದ ಸಮಸ್ಯೆಗಳಿಗೂ ಸ್ಪಂದಿಸಿ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಾನಂದ ಬೆನ್ನೂರು ಉಪನ್ಯಾಸಕರ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.ಆ ನಿಟ್ಟಿನಲ್ಲಿ ಸಂಘವು ಸಕ್ರಿಯವಾಗಿ ಸ್ಪಂದಿಸಲು ಸಿದ್ಧವಿದೆ.ನೂತನ ಪದಾಧಿಕಾರಿಗಳು ಸಂಘಟನೆಗಾಗಿ ಶ್ರಮಿಸಬೇಕು ಎಂದರು.  

ಇದೇ ಸಂದರ್ಭದಲ್ಲಿ ಹಾವೇರಿ ತಾಲೂಕು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಹಾಗೆಯೇ ಈ ಸಾಲಿನ  ರಾಜ್ಯೋತ್ಸವ ಪ್ರಶಸ್ತಿ ಪಡೆದ ಖ್ಯಾತ ಸಾಹಿತಿಗಳಾದ ಸತೀಶ ಕುಲಕರ್ಣಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವ ಸಮರ​‍್ಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿ ತಾಲೂಕು ಘಟಕದ ಅಧ್ಯಕ್ಷ ಶೇಖರ ಭಜಂತ್ರಿ ವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ.ಪಿ.ಬ್ಯಾಡಗಿ, ಜಿಲ್ಲಾ ಕಾರ್ಯದರ್ಶಿಗಳಾದ ಪರಶುರಾಮ ಗಚ್ಚಿನಮನಿ ಸಂಸ್ಥೆಯ ಅಧ್ಯಕ್ಷ ಪ್ರಶಾಂತಕುಮಾರ ಬೆನ್ನೂರು, ತಾಲೂಕು ಕಾರ್ಯದರ್ಶಿ ವೀರೇಶ ಹಿತ್ತಲಮನಿ,ಖಜಾಂಚಿ ಪ್ರವೀಣ ಹುರಕಡ್ಲಿ, ಮುತ್ತುರಾಜ ಗುತ್ತಲ ಇತರರು ಉಪಸ್ಥಿತರಿದ್ದರು. ವೀರೇಶ ಹಿತ್ತಲಮನಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಉಪನ್ಯಾಸಕ ಮಂಜುನಾಥ ಹತ್ತಿಯವರ ವಂದಿಸಿದರು. 


ಸುದ್ದಿ ಓದಿ