ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ರಾಜ್ಯ ಸಂಘದ ಮಹತ್ವದ ಸಭೆ
ಲೋಕದರ್ಶನ ವರದಿ
ಹುಬ್ಬಳ್ಳಿ 17: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ (ರಾಜ್ಯ ಘಟಕ, ಹುಬ್ಬಳ್ಳಿ) ವತಿಯಿಂದ ಅನುದಾನಿತ ಶಾಲೆಗಳ ನೌಕರರು ಹಾಗೂ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ದಿನಾಂಕ 16-7-2026, ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಇದರ ಮಾನ್ಯ ಕಾರ್ಯದರ್ಶಿಗಳೊಂದಿಗೆ ಮಹತ್ವದ ಚರ್ಚೆ ನಡೆಯಿತು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಅನುದಾನಿತ ಶಾಲೆಗಳ ಬಹುಕಾಲದ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸಮಗ್ರವಾಗಿ ಮಂಡಿಸಿದರು. ಪ್ರಮುಖವಾಗಿ 01-04-2006ರಿಂದ ಹಾಗೂ ನಂತರ ನೇಮಕಗೊಂಡ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸುವ ಕುರಿತು ಮನವಿ ಸಲ್ಲಿಸಲಾಯಿತು. ಈ ವಿಷಯವು ಸರ್ಕಾರದ ಮಟ್ಟದಲ್ಲಿ ನೀತಿ ನಿರ್ಧಾರಕ್ಕೆ ಸಂಬಂಧಿಸಿದ್ದು, ಸಂಘದ ಮನವಿಯನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ಕಾರ್ಯದರ್ಶಿಗಳು ಭರವಸೆ ನೀಡಿದರು.
ಮನ್ನಣೆ ನವೀಕರಣ, ಪಿ.ಟಿ.ಆರ್. ಸಮಸ್ಯೆ, ಬಡ್ತಿ ಹಾಗೂ ವರ್ಗಾವಣೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ಸಂಘ ಮನವರಿಕೆ ಮಾಡಿಕೊಟ್ಟಿತು. ಈ ಸಮಸ್ಯೆಗಳ ಬಗ್ಗೆ ಇಲಾಖೆಗೆ ಸಂಪೂರ್ಣ ಅರಿವಿದ್ದು, ಶಿಕ್ಷಕರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅನುದಾನಿತ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಕೆ.ಪಿ.ಎಸ್. (ಪಬ್ಲಿಕ್) ಶಾಲೆಗಳಿಗೆ ಅನುಮತಿ ನೀಡುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿದು ಅನುದಾನಿತ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿತು. ಈ ವಿಷಯಕ್ಕೆ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಇದಲ್ಲದೆ ಮಲೆನಾಡು ಪ್ರದೇಶಗಳ ಶಾಲೆಗಳಲ್ಲಿನ ವಿದ್ಯಾರ್ಥಿ ಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳು, ಮನ್ನಣೆ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಹಬ್ಬದ ಮುಂಗಡ, ಇಕೋ ಕ್ಲಬ್ ಹಾಗೂ ಪ್ರಶ್ನೆಪತ್ರಿಕೆಗಳಿಗೆ ಅನುದಾನ ಒದಗಿಸುವುದು, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವುದು ಮತ್ತು ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸೃಜಿಸುವ ಕುರಿತು ಚರ್ಚಿಸಲಾಯಿತು.
31-12-2020ರವರೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ನೀಡಿರುವ ಅನುಮತಿಯಂತೆ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ಸಂಘ ಮನವಿ ಮಾಡಿತು. ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಪುಸ್ತಕಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಂಡಿಸಲಾದ ಎಲ್ಲಾ ವಿಷಯಗಳಿಗೂ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನಿತ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀ ಜಿ. ಆರ್. ಭಟ್ ಅವರು ತಿಳಿಸಿದ್ದಾರೆ.