ನಿಶ್ಚಿತ ಪಿಂಚಣಿ ಜಾರಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಜಮಖಂಡಿ 10: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಹಳೆ ನಿಶ್ಚಿತ ಪಿಂಚಣಿ ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ತಹಶೀಲ್ದಾರ ಸದಾಶಿವ ಮಕ್ಕೋಜಿಯವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್.ಕೆ.ಕರಡಿ ಮಾತನಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದೂ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಸರಕಾರ ಕಾಲ ಹರಣ ಮಾಡುತ್ತಿದೆ. ಈ ಧೋರಣೆಯಿಂದ ಬೇಸತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಈಗ ಮತ್ತೆ ಹೋರಾಟಕ್ಕಿಳಿಯುವಂತೆ ಮಾಡಿದೆ. ಅಸಂಖ್ಯಾತ ನೌಕರರು ಇಂದು ಜಾತಕಪಕ್ಷಿಯಂತೆ ಓಪಿಎಸ್ ಜಾರಿಗಾಗಿ ಎದುರು ನೋಡುತ್ತಿದ್ದಾರೆ. ಖಾಸಗಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಕಳೆದ 2006 ರ ಪೂರ್ವದಿಂದ ಸೇವೆಗೈಯುತ್ತಿರುವ ಮತ್ತು ನಿವೃತ್ತಿ, ನಿಧನ ಹೊಂದಿರುವ ನೌಕರರ ಕುಟುಂಬ ಪರಿವಾರದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಓಪಿಎಸ್ ಶೀಘ್ರ ಜಾರಿಗೊಳ್ಳಲಿ ಇಲ್ಲವಾದಲ್ಲಿ ಪ್ರತಿಭಟನೆ ಹೋರಾಟಕ್ಕೆ ಅನಿವಾರ್ಯ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಬಿ.ಆರ್.ಖವಟಕೊಪ್ಪ, ಎಂ.ಎನ್.ಪತ್ತಾರ, ಡಿ.ಆರ್.ಖವಟಕೊಪ್ಪ, ಎನ್.ಎಸ್.ತುಪ್ಪದ, ಎನ್.ವಿ.ದೇಸಾಯಿ, ಕೆ.ಎಚ್.ಸಣಮನಿ, ಬಿ.ಎ.ನರಸಗೌಡರ, ಎಸ್.ವಾಯ, .ಕಮತೆ ಸೇರಿದಂತೆ ತಾಲೂಕಿನ ಪಿಂಚಣಿ ವಂಚಿತ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಪದಾಧಿಕಾರಿಗಳು ಇದ್ದರು.