ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ಹನುಮಾನ-ಬೆಂಡವಾಡ ಏತ ನೀರಾವರಿ ಯೋಜನೆಗೆ ಚಾಲನೆ ಕೊಡಲಿ
ಚಿಕ್ಕೋಡಿ 20: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕರಗಾಂವ ಏತ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದು ಈಗ ಮರು ಟೆಂಡರ ಕರೆದು ಯೋಜನೆ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿಸಿದೆಂದು ಜನರಿಗೆ ಸುಳ್ಳು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ಹನುಮಾನ ಮತ್ತು ಬೆಂಡವಾಡ ಏತ ನೀರಾವರಿ ಯೋಜನೆ ಮಂಜೂರು ಮಾಡಿ ತೋರಿಸಲಿ ಎಂದು ಶಾಸಕ ದುರ್ಯೋಧನ ಐಹೊಳೆ ಸವಾಲು ಹಾಕಿದರು.
ಚಿಕ್ಕೋಡಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕರಗಾಂವ ಏತ ನೀರಾವರಿ ಯೋಜನೆ ಇದು ನನ್ನ ಕನಸಿನ ಯೋಜನೆ, ಈ ಯೋಜನೆಯಿಂದ ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ. ಕಾಂಗ್ರೆಸ್ ನಾಯಕರಿಗೆ ತಾಕತ್ತು ಇದ್ದರೆ ರಾಯಬಾಗ ಕ್ಷೇತ್ರದ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಹನುಮಾನ ಏತ ನೀರಾವರಿ ಯೋಜನೆ ಮತ್ತು ಬೆಂಡವಾಡ ಏತ ನೀರಾವರಿ ಯೋಜನೆ ಜಾರಿ ಮಾಡಿ ತೋರಿಸಬೇಕು. ಯೋಜನೆ ಮಂಜೂರಾದರೆ ಕಾಂಗ್ರೆಸ್ ನಾಯಕರಿಗೆ ಒಂದೊಂದು ತೊಲಿ ಬಂಗಾರ ಹಾಕಿ ಸನ್ಮಾನ ಮಾಡುತ್ತೇನೆ ಎಂದದರು.
ಕರಗಾಂವ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಗೋವಿಂದ ಕಾರಜೋಳ ಅವರು ವಿಶೇಷ ಪ್ರಯತ್ನ ಮಾಡಿ 2023 ಮಾರ್ಚ ತಿಂಗಳಲ್ಲಿ ಟೆಂಡರ ಕರೆದು ಯೋಜನೆಗೆ ಚಾಲನೆ ನೀಡಲಾಗಿತ್ತು. ನಂತರ ಬಂದ್ ಕಾಂಗ್ರೆಸ್ ಸರ್ಕಾರ ಯೋಜನೆ ತಡೆ ಹಿಡಿದಿತ್ತು. ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮೇಲಿಂದ ಮೇಲೆ ಭೇಟಿ ಮಾಡಿ ಯೋಜನೆಗೆ ಅನುದಾನ ಕೊಡಬೇಕೆಂದು ಮನವಿ ಮಾಡಿದಾಗ ಈಗ ಮರು ಟೆಂಡರ ಮಾಡಿ ಯೋಜನೆಗೆ 100 ಕೋಟಿ ರೂ ಅನುದಾನ ಒದಗಿಸಿದ್ದಾರೆ ಎಂದರು.
ಈ ಯೋಜನೆಯು ನಾಗರಮುನ್ನೋಳ್ಳಿ ಮತ್ತು ಕರೋಶಿ ಜಿಪಂ ವ್ಯಾಪ್ತಿಯ 14 ಗ್ರಾಮಗಳು ಬರುತ್ತಿವೆ. ರೈತರ ಸುಮಾರು 8300 ಹೆಕ್ಟೇರ ನೀರಾವರಿಗೆ ಒಳಪಡಲಿದೆ. ಈಯೋಜನೆಗೆ 567 ಕೋಟಿ ರೂ ಅನುದಾನ ಮಂಜೂರಾಗಿದೆ. ಮೊದಲ ಹಂತವಾಗಿ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಿ ರೈತರ ಬಹುದಿನಗಳ ಬೇಡಿಕೆಗೆ ಜಯ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ದುರೀಣ ಸುರೇಶ ಬೆಲ್ಲದ, ಸಂಜು ಪಾಟೀಲ, ದುಂಡಪ್ಪ ಬೆಂಡವಾಡೆ, ರಾಜು ಹರಗನ್ನವರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ರಮೇಶ ಕಾಳನ್ನವರ, ಬಸು ಮಾಳಗೆ, ಶಿವರಾಯ ಕಮತೆ, ವಿಜಯ ಕೊಠಿವಾಲೆ, ಮುರಿಗೇಪ್ಪ ಅಡಿಸೇರಿ, ಮನೋಜ ಮನಗೂಳಿ ಮುಂತಾದವರು ಇದ್ದರು.