ಧರ್ಮ ಉಳಿದರೆ ಸಂಸ್ಕೃತಿ ಉಳಿಯುತ್ತದೆ: ರಂಭಾಪುರಿ ಜಗದ್ಗುರು
ಯಲಬುರ್ಗಾ, ಅ.5: ಧರ್ಮವು ನಮ್ಮ ಸಂಸ್ಕೃತಿಯ ಬುನಾದಿಯಾಗಿದ್ದು, ಧರ್ಮದಿಂದ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತಿಯಿಂದ ಸಮಾಜಕ್ಕೆ ಶಕ್ತಿ ಹಾಗೂ ಸದ್ಗುಣಗಳು ದೊರೆಯುತ್ತವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಶಿಲಾ ಮಂಟಪ ಉದ್ಘಾಟನೆ ಅಂಗವಾಗಿ ಸೋಮವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯ ಬೇರುಗಳು ಧರ್ಮ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿವೆ. ನಮ್ಮ ನಾಡಿನ ಮಣ್ಣು ಕೇವಲ ಭೌಗೋಳಿಕ ಪ್ರದೇಶವಲ್ಲ. ಆಚಾರ್ಯರು, ಋಷಿಮುನಿಗಳು ಹಾಗೂ ಸತ್ಪುರುಷರ ಜ್ಞಾನ, ಅನುಭವ ಮತ್ತು ಸಂಸ್ಕಾರದಿಂದ ಪಾವನಗೊಂಡ ಪುಣ್ಯಭೂಮಿಯಾಗಿದೆ. ಇಂತಹ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಗುರುಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಧರ್ಮ, ಸಂಸ್ಕೃತಿ, ಸದಾಚಾರ, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣಗಳಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಾಮುನಿಗೆ ಶಿವಾದ್ವೈತ ಸಿದ್ಧಾಂತ ಬೋಧಿಸಿ ಜ್ಞಾನಮಾರ್ಗ ತೋರಿಸಿದ್ದಾರೆ. ಗುರುಪರಂಪರೆಯ ಆದರ್ಶಗಳನ್ನು ಸಮಾಜದಲ್ಲಿ ಜೀವಂತವಾಗಿಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.