ಆಧ್ಯಾತ್ಮದ ಸೂರ್ಯ ಸುತಾರ ಅಸ್ತಂಗತ,
ಪದ್ಮಶ್ರೀ ಪುರಸ್ಕೃತ, ಕನ್ನಡದ ಕಬೀರ ಇಬ್ರಾಹಿಂ ಸುತಾರ ವಿಧಿವಶ
ಕಳಚಿದ ಭವ್ಯ ನಾಡಿನ ಭಾವೈಕ್ಯತೆಯ ಕೊಂಡಿ, ದು:ಖ ಸಾಗರದಲ್ಲಿ ನಾಡಿನ ಜನತೆ
ಮಹಾಲಿಂಗಪುರ : ಖ್ಯಾತ ಪ್ರವಚನಕಾರ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಶನಿವಾರ ಬೆಳಗ್ಗೆ 6-30 ಕ್ಕೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಸಾವಿನಿಂದ ಇಡೀ ನಾಡಿನ ಭಾವೈಕ್ಯತೆಗೆ ಹಾಗೂ ಆಧ್ಯಾತ್ಮ ಲೋಕಕ್ಕೆ ತುಂಬಲಾರದ ನಷ್ಟವಾಗಿ ಭಾವೈಕ್ಯತೆಯ ಕೊಂಡಿ ಕಳಚಿದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ನಾಡಿನ ಸೂಫಿ ಸಂತ ಶರಣ ಶ್ರೀ ಇಬ್ರಾಹಿಂ ಎಂ, ಸುತಾರ ಅವರು ದಿ.10-05-1940 ರಲ್ಲಿ ಬಡಕುಟುಂಬದಲ್ಲಿ ಜನಿಸಿದರು. ಇವರ ತಂದೆ ನಬಿಸಾಹೇಬ ತಾಯಿ ಅಮೀನಾಬಿ ಇವರ ಮನೆತನದ ಮೂಲ ಹೆಸರು ಬಿಸ್ತಿ, ತಂದೆಯವರ ಬಡಿಗತನ ವೃತ್ತಿಯಿಂದಾಗಿ (ಉರ್ದು ಭಾಷಾಂತರದಿಂದ) ಸುತಾರ ಎಂಬ ಪದನಾಮ ಬಳಕೆಗೆ ಬಂದಿದೆ.
1960 ರಲ್ಲಿಯೇ ಬಾಲ್ಯ ಸ್ನೇಹಿತರೊಂದಿಗೆ ರಮಜಾನ್ ಜಾಗರಣೆ ಸಂಘ ಕಟ್ಟಿದ್ದು ವಿಶೇಷ. ಮೂಲ ಕಾಯಕ ನೇಕಾರಿಕೆ. ಶಿಕ್ಷಣ ಪಡೆದದ್ದು ಉರ್ದು 3 ನೇ ತರಗತಿ 1970 ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ ಸ್ಥಾಪಿಸಿ, 5 ದಶಕಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ವಿನೂತನ ಸಮಾಜ ಸೇವೆಯೊಂದಿಗೆ ಎಲ್ಲ ಮಹಾತ್ಮರ ಸಾಹಿತ್ಯವನ್ನು ಬಳಸಿ ಸರಳ ಆಡುಭಾಷೆಯಲ್ಲಿ ಭಾವೈಕೆತೆಯ ಸಂದೇಶವನ್ನು ಬೀರಿ ಸರ್ವರ ಅಚ್ಚುಮೆಚ್ಚಿನ ಸುತಾರಜಿಯಾದರು.
ಗುರುವೃಂದ ಮತ್ತು ಶಾಸ್ತ್ರಾಬ್ಯಾಸ.; ಸೂಫಿ ಸಂತರಾದ ಹಜರತ್ ಶೇಖುಲ್ ಮಸಾಯಿಕ್ ಜುನ್ನೇದಿ ಸಾ. ಕುಡಚಿ ಇವರಿಂದ ಗುರುದೀಕ್ಷೆ ಪಡೆದು ನಾಡಿನ ಖ್ಯಾತ ಸ್ವಾಮೀಜಿಗಳಿಂದಲೂ ಭಜನೆ ಮತ್ತು ಪ್ರವಚನ, ಸಾಹಿತ್ಯ ಸೇವೆ ಕಲಿತು ನಾಡಿನ ಆಧ್ಯಾತ್ಮ ಜೀವಿಗಳಿಗೆ ಅದನ್ನೇ ಉಣಬಡಿಸಿ ಆಧ್ಯಾತ್ಮ ರಂಗದ ದಿವ್ಯ ಚೇತನವಾದರು.
ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು : ನಾಡಿನ ಹೆಸರಾಂತ ಪ್ರವಚನಕಾರರಲ್ಲಿ ಅಗ್ರಗಣ್ಯರು ಎಸಿಕ್ಕೊಂಡು 2018 ಜನೆವರಿ 26 ರಂದು ಕೇಂದ್ರದ ಪದ್ಮಶ್ರೀ ಪ್ರಶಸ್ತಿ ಪಡೆದರು. 1995 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕಥಾ ಕೀರ್ತನ ಕ್ಷೇತ್ರದ ಕರ್ನಾಟಕ ಕಲಾಶ್ರೀ, ಆಳ್ವಾಸ್ ನುಡಿಸಿರಿ, ಕನ್ನಡದ ಕಬೀರ, ಸೂಫಿಸಂತ ಮತ್ತು ಕನ್ನಡ ವಾಹಿನಿಯ ಗಡಿನಾಡ ಕನ್ನಡಿಗ ಪ್ರಶಸ್ತಿಗಳನ್ನೊಳಗೊಂಡು ಇನ್ನೂ ನೂರಾರು ಪ್ರಶಸ್ತಿಗಳು ಹಾಗೂ ಬಿರುದುಗಳನ್ನು ಪಡೆದು ಇವರು ಪಟ್ಟಣದ ಕೀರ್ತಿಯನ್ನು ದೆಹಲಿಯವರೆಗೆ ಹರಿಸಿ ಶಿಶುವಿನಾಳ ಶರೀಫರ ನಂತರದ ಸ್ಥಾನ ಇವರದಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಅವರ ಸಮಕಾಲೀನಲ್ಲಿ ನಮ್ಮ ಜೀವನ ಸಾಗಿ ಬಂದಿರುವುದು ಸೌಭಾಗ್ಯವೇ ಸರಿ. ಒಟ್ಟಾರೆಯಾಗಿ ಕಳಚಿದ ಭವ್ಯ ನಾಡಿನ ಭಾವೈಕ್ಯತೆಯ ಕೊಂಡಿ, ದು:ಖ ಸಾಗರದಲ್ಲಿ ನಾಡಿನ ಜನತೆ.