ಇಂದಿನ ನವೋದ್ಯಮಗಳು ಮುಂದಿನ ಬಹುರಾಷ್ಟ್ರೀಯ ಕಂಪೆನಿಗಳು: ಮೋದಿ
ನವದೆಹಲಿ, ಜ 2 : ದೇಶದಲ್ಲಿ ಇಂದು ತಲೆ ಎತ್ತುತ್ತಿರುವ ಸ್ಟಾರ್ಟ್‌ಅಪ್‌ಗಳು ಮುಂದಿನ ಬಹುರಾಷ್ಟ್ರೀಯ ಕಂಪೆನಿಗಳು ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ..ಒಡಿಶಾದ ಸಂಬಲ್‌ಪುರ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್- ಐಐಎಂನ ಕಟ್ಟಡ ನಿರ್ಮಾಣಕ್ಕೆ ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕೃಷಿ ವಲಯದಿಂದ ಬಾಹ್ಯಾಕಾಶವಲಯದವರೆಗೆ ಸ್ಟಾರ್ಟ್‌ಅಪ್‌ನ ವ್ಯಾಪ್ತಿ ಹೆಚ್ಚುತ್ತಿದೆ. ಹೆಚ್ಚಿನ ಸ್ಟಾರ್ಟ್‌ಅಪ್‌ಗಳು ೨ ಮತ್ತು ೩ನೇ ಹಂತದ ನಗರಗಳಿಂದ ಬರುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಸ್ಟಾರ್ಟ್ ಅಪ್ ಗಳಿಂದ ದೇಶದಲ್ಲಿ ಉದ್ಯೋಗ ಹೆಚ್ಚಾಗುತ್ತಿದೆ. ಜತೆಗೆ ಔದ್ಯಮಿಕ ಕ್ಷೇತ್ರದ ವ್ಯಾಪ್ತಿಯೂ ವಿಸ್ತರಿಸುತ್ತಿದೆ.
ನಿಜಕ್ಕೂ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಬ್ರ್ಯಾಂಡ್ ಇಂಡಿಯಾ ಬಗೆಗೆ ಯುವ ಸಮುದಾಯ ಬೃಹತ್ ಹೊಣೆಗಾರಿಕೆ ಹೊಂದಿದೆ ಎಂದರು.ಕೊರೊನಾ ಸಾಂಕ್ರಾಮಿಕ ಆತಂಕದ ನಡುವೆಯು ೨೦೨೦ರಲ್ಲಿ ದೇಶದಲ್ಲಿ ಹಲವಾರು ಬೆಳವಣಿಗೆಗಳು ನಡೆದಿವೆ. ಇವೆಲ್ಲವೂ ನಮಗೆ ಸವಾಲಾಗಿ ಪರಿಣಮಿಸಿದ್ದು, ಇದರಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ಎಂದು ಪ್ರಧಾನಿ ಹೇಳಿದರು.೨೦೧೪ರವರೆಗೆ ಭಾರತದಲ್ಲಿ ಕೇವಲ ೧೩ ಐಐಎಂಗಳಿದ್ದವು, ಇದೀಗ ಅವುಗಳ ಸಂಖ್ಯೆ ೨೦ಕ್ಕೆ ಹೆಚ್ಚಳವಾಗಿದೆ. ಇದರಿಂದಾಗಿ ಆತ್ಮನಿರ್ಭರ್ ಅಭಿಯಾನಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಸಂಬಲ್‌ಪುರದ ಐಐಎಂ ಶಾಶ್ವತ ಕ್ಯಾಂಪಸ್ ಒಡಿಶಾದ ಭವ್ಯ ಪರಂಪರೆಯನ್ನು ಪ್ರತಿನಿಧಿಸಲಿದೆ ಎಂದು ಹೇಳಿದರು.ಒಡಿಶಾ ರಾಜ್ಯಪಾಲ ಪ್ರೋಫೆಸರ್ ಗಣೇಶಿಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವರಾದ ರಮೇಶ್ ಪೋಖ್ರಿಯಾಲ್, ಧರ್ಮೇಂದ್ರ ಪ್ರಧಾನ್, ಪ್ರತಾಪ್ ಚಂದ್ರ ಸಾರಂಗಿ ಮತ್ತಿತರರು ಪಾಲ್ಗೊಂಡಿದ್ದರು.