ಗ್ರಾಮಗಳ ಅಭಿವೃದ್ಧಿಯೇ ನಾಡಿನ ಪ್ರಗತಿಯ ಅಡಿಪಾಯ: ಲಮಾಣಿ
ಶಿರಹಟ್ಟಿ 29: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಜತೆಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ತಾಲೂಕಿನ ಸಾಸಲವಾಡ ಗ್ರಾಮದಲ್ಲಿ 709 ಇ ಅನುದಾನದಡಿ ಗ್ರಾಮಗಳ ಆಯ್ದ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ದೊರೆತರೆ ಸಂಚಾರ, ವ್ಯಾಪಾರ-ವಹಿವಾಟು, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ರಸ್ತೆ ನಿರ್ಮಾಣ ಹಾಗೂ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದರ ಜತೆಗೆ ಸಾರ್ವಜನಿಕರ ಅಗತ್ಯತೆಗಳಿಗೆ ಆದ್ಯತೆ ನೀಡಬೇಕು. ಗ್ರಾಮಗಳ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ಜನರ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಲದ ಅಧ್ಯಕ್ಷೆ ಸುನೀಲ ಮಹಾಂತಶೆಟ್ಟರ, ವಕೀಲರಾದ ಎಸ್.ಎಸ್. ಪಾಟೀಲ, ಹೇಮಂತ ಕೆಂಗೊಂಡ, ಜಾನು ಲಮಾಣಿ, ಶಾಂತಪ್ಪ ಬಳ್ಳಾರಿ, ಮುತ್ತಪ್ಪ ಹಾಲಗಿ, ಮಂಜುನಾಥ ಶಂಕಿನದಾಸರ, ಸಣ್ಣವೀರ್ಪ ಹಳ್ಳೆಪ್ಪನವರ, ಮಾಂತೇಶ ಹಳ್ಳೆಪ್ಪನವರ, ನಾಗಯ್ಯ ಗಡ್ಡಿಮಠ, ರುದ್ರಮುನಿ ಕುಲಕರ್ಣಿ, ಸತೀಶ ಕೋಟೆಪ್ಪನವರ, ರಾಜಶೇಖರ ಅರಳಿ, ಚೆನ್ನವೀರಗೌಡ ಪಾಟೀಲ, ಶಿವನಗೌಡ ಕಂಟಿಗೌಡ್ರ ಸೇರಿದಂತೆ ಹಲವರು ಇದ್ದರು.