ನಾನು ಸಹ ಟಿಕೇಟ್ ಆಕಾಂಕ್ಷಿ ಇದ್ದೆ : ಸಾಲಿ
ಸಿಂದಗಿ 20 : ಈಗಾಗಲೇ ಸಿಂದಗಿ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ ಅಶೋಕ ಮನಗೂಳಿಯವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ನಾನು ಸಹ ಟಿಕೇಟ್ ಆಕಾಂಕ್ಷಿ ಇದ್ದೆ, ನನ್ನ ಜೊತೆ ಅಶೋಕ ಮನಗೂಳಿ ಸೇರಿ ಇನ್ನು ನಾಲ್ಕು ಜನ ಟಿಕೇಟ್ ಆಕಾಂಕ್ಷಿಗಳಿದ್ದರು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ 2018ರ ಸಿಂದಗಿ ವಿಧಾನಸಭೆಯ ಚುನಾವಣೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಯಾಗಿರುವ ಮಲ್ಲಣ್ಣ. ಎನ್ ಸಾಲಿ(ಚಿಕ್ಕ ಅಲ್ಲಾಪೂರ) ಹೇಳಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು, ಆಕಾಂಕ್ಷಿಗಳಿಗೆ ಅಸಮಾಧಾನವಾಗುವುದು ಸಹಜ ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ, ಹೈಕಮಾಂಡ ನಮ್ಮೆಲ್ಲ ಆಕಾಂಕ್ಷಿಗಳಿಗೆ ಕರೆದು ಸಭೆ ಮಾಡಿ ನಮ್ಮ ಅಭಿಪ್ರಾಯ ಪಡೆದುಕೊಂಡಿದ್ದು, ನಾವು ಹೈಕಮಾಂಡ ನಿರ್ಧಾರಕ್ಕೆ ಬದ್ಧರಿರುತ್ತೇವೆ ಎಂದು ಪಕ್ಷದ ನಾಯಕರಿಗೆ ಮಾತು ಕೊಟ್ಟಿದ್ದೇವೆ, ಪಕ್ಷ ಯಾರಿಗೆ ಟಿಕೇಟ್ ನೀಡಿದರು ಒಗ್ಗಟ್ಟಿನಿಂದ ಚುನಾವಣೆ ಮಾಡುತ್ತೇವೆಂದು ಪಕ್ಷದ ನಾಯಕರಿಗೆ ತಿಳಿಸಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕಿಂತಲೂ ವ್ಯಕ್ತಿ ದೊಡ್ಡವನಲ್ಲ, ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಲೇಬೇಕು, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲೇಬೇಕು, ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಅದು ನಮ್ಮ ಕರ್ತವ್ಯ ಎಂದು ಸಾಲಿ ಸ್ಪಷ್ಠ ಪಡಿಸಿದರು.
ಟಿಕೇಟ್ ಘೋಷಣೆಗಿಂತಲೂ ಮುಂಚೆ ನಾವೆಲ್ಲರೂ ಪೈಪೋಟಿಯಲ್ಲಿ ಇರಬೇಕು ಟಿಕೇಟ್ ಘೋಷಣೆ ಆದ ನಂತರ ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಿರಬೇಕು. ಮತ್ತೆ ಅವಕಾಶ ಸಿಕ್ಕಾಗ ಪಕ್ಷ ನಮಗೆ ಕೈ ಬಿಡುವುದಿಲ್ಲ, ಯಾರು ಆಕಾಂಕ್ಷಿಗಳು ಅಸಮಾಧಾನ ಆಗಬಾರದು, ಆದರೆ ನಿಮ್ಮ ಅಭಿಪ್ರಾಯ ಹೈಕಮಾಂಡ್ಗೆ ತಿಳಿಸಿ ಹೈಕಮಾಂಡ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ದುಡಿಯೋಣವೆಂದು ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.