ಅಧಿಕಾರಕ್ಕಾಗಿ ಮಂತ್ರಿ ಪದವಿಗಾಗಿ ಯಾರ ಹಿಂದೆಯೂ ನಾನು ಅಲೆದಾಡುವವನಲ್ಲ :ಲಕ್ಷ್ಮಣಸವದಿ
ಅಥಣಿ 13. ಅಧಿಕಾರಕ್ಕಾಗಿ ಅಥವಾ ಮಂತ್ರಿ ಪದವಿಗಾಗಿ ಯಾರ ಹಿಂದೆಯೂ ನಾನು ಅಲೆದಾಡುವವನಲ್ಲ, ಅಧಿಕಾರದ ಮಹತ್ವಾಕಾಂಕ್ಚಿಯೂ ಅಲ್ಲ. ಅಧಿಕಾರದಲ್ಲಿದ್ದಾಗ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುವುದೇ ನನ್ನ ಗುರಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ತಮ್ಮ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ ನೀಡಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಥಣಿ ಪಟ್ಟಣದ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಶಿಷ್ಯನಾದ ನಾನು ಅಧಿಕಾರಕ್ಕಿಂತ ಜನರ ಸೇವೆಯಲ್ಲಿಯೇ ಸಾರ್ಥಕತೆ ಕಂಡುಕೊಂಡವನು ಹೀಗಾಗಿಯೇ ನಾನು ಟೀಕೆ ಅಥವಾ ಮಾತುಗಳಿಗೆ ಮಹತ್ವ ನೀಡದೇ ನಾವು ಮಾಡಿದ ಕಾರ್ಯಗಳೇ ಸಾಧನೆಗಳಾಗಬೇಕು ಎನ್ನುವದರಲ್ಲಿ ನಂಬಿಕೆ ಇಟ್ಟುಕೊಂಡಿರುವೆ ಎಂದ ಅವರು ಅಥಣಿಯ ಜನತೆ ಕಳೆದ 20 ವರ್ಷಗಳಿಂದ ಶಾಸಕನಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದು, ಅಥಣಿ ಅಭಿವೃದ್ಧಿಗೆ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಅಥಣಿ ಜನತೆಯ ಋಣ ತಿರಿಸುವ ಪ್ರಯತ್ನ ಮಾಡುವೆ ಎಂದರು. ಪಟ್ಟಣದ ಜನಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಸದ್ಯಕ್ಕಿರುವ ವ್ಯವಸ್ಥೆಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಈಗಾಲೇ ಪಟ್ಟಣದ ಜನಸಂಖ್ಯೆ 65000 ಕ್ಕೂ ಹೆಚ್ಚಾಗಿದ್ದು, ನಿರಂತರವಾಗಿ ಕುಡಿಯುವ ನೀರು ಪೂರೈಕೆಗೆ ಅಮೃತ 2.0 ಈ ಯೋಜನೆಯ ಅನುಷ್ಠಾನ ಅನಿವಾರ್ಯವಾಗಿದೆ ಎಂದ ಅವರು ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಸಮಾರಂಭದಲ್ಲಿ ನಾನು ಸಂಕಲ್ಪ ಮಾಡಿದಂತೆ ಈ ಯೋಜನೆಗೆ ಚಾಲನೆ ನೀಡಿರುವೆ ಎಂದರು.
ಈ ಯೋಜನೆಯಡಿ 185 ಕಿಲೋ ಮೀಟರ ಉದ್ದದ ಪೈಪಲೈನ್ ಅಳವಡಿಸಿ, ಐದು ಸ್ಥಳಗಲ್ಲಿ ಓವ್ಹರ ಹೆಡ್ಡ ಟ್ಯಾಂಕ ನಿರ್ಮಿಸುವ ಮೂಲಕ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಇದೇ ಯೋಜನೆಯಡಿ ಅಥಣಿ ಪಟ್ಟಣದ ಜೊತೆಗೆ ಸುತ್ತಮುತ್ತಲಿನ ತೋಟದ ಮನೆಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದ ಅವರು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಹಕಾರದಿಂದ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಮಾರು 2000 ಕೋಟಿಗಳಷ್ಟು ಅನುದಾನ ಬಿಡುಗಡೆಗೊಳಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 1365 ಕೋಟಿ, ಸತ್ತಿ ಮತ್ತು ದರೂರ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅಂದಾಜು 85 ಕೋಟಿ, ಅಥಣಿ ಜೋಡು ಕೆರೆಗಳ ಅಭಿವೃದ್ಧಿಗೆ 25:ಕೋಟಿ, ಪಶು ವೈದ್ಯಕೀಯ ಮಹಾವಿದ್ಯಾಲಯದ ಅಭಿವೃದ್ಧಿಗೆ ಹೆಚ್ಚೂವರಿಯಾಗಿ 82 ಕೋಟಿ, ಅಥಣಿ ಹೊರ ವಲಯದಲ್ಲಿರುವ ಭಾಗೀರಥಿ ಹಳ್ಳ ಅಥವಾ ನಾಲಾ ಅಭಿವೃದ್ಧಿಗಾಗಿ 10 ಕೋಟಿ ಸೇರಿದಂತೆ ಅಥಣಿ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಯಷ್ಟು ಅನುದಾನ ಬಿಡುಗಡೆಯಾಗಿದ್ದು, ಇದಕ್ಕಾಗಿ ಸಿಎಮ್ ಮತ್ತು ಡಿಸಿಎಮ್ ಇಬ್ಬರಿಗೂ ನಾನು ಚಿರ ಋಣಿ ಎಂದರು.
ಅಥಣಿ ಪಯರಸಭೆಗೆ ಮುಖ್ಯಾಧಿಕಾರಿಯಾಗಿರುವ ಅಶೋಕ ಗುಡಿಮನಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಡಿಮನಿಯವರ ಹಿನ್ನೆಲೆ ಮತ್ತು ಕಾರ್ಯಶೈಲಿ ಗಮನಿಸಿ ನಾನು ಅಥಣಿ ಪುರಸಭೆಗೆ ಕಾರ್ಯನಿರ್ವಹಿದಲು ಅರನ್ನು ಒಂದು ವರ್ಷದ ಹಿಂದೆಯೇ ನಿಯುಕ್ತಿಗೊಳಿಸಿಕೊಂಡಿದ್ದು, ಅವರೊಂದಿಗೆ ಪುರಸಭೆಯ ಎಲ್ಲ 27 ಸದಸ್ಯರೂ ಕೂಡ ಸಹಕಾರ ನೀಡಬೇಕು ಎಂದ ಅವರು ಪುರಸಭೆಯ ವ್ಯಾಪ್ತಿಯಲ್ಲಿರುವ ಸರಕಾರಿ ಮತ್ತು ಸಾರ್ವಜನಿಕರಿಗಾಗಿ ಮೀಸಲಿಟ್ಟ ಉದ್ಯಾನವನ ಸ್ಥಳಗಳನ್ನು ಸಂರಕ್ಷಿಸಿಕೊಳ್ಳುವುದು ಕೂಡ ಪುರಸಭಾ ಸದಸ್ಯರ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.
ಅಧಿಕಾರ ಶಾಶ್ವತ ಅಲ್ಲ ಆದರೆ ಅಧಿಕಾರ ಸಿಕ್ಕಾಗ ಅದನ್ಬು ಜನರ ಸೇವೆಗೆ ಸದ್ಬಳಿಕೆ ಮಾಡಿಕೊಂಡಲ್ಲಿ ಮಾತ್ರ ಜನ ನಮ್ಮನ್ನು ನಂಬುತ್ತಾರೆ ಎನ್ನುಲು ನಾನೇ ಉತ್ತಮ ಉಧಾರಣೆ ಎಂದ ಅವರು ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಥಣಿಯ ಜನತೆ ನನಗೆ 131000 ಮತಗಳನ್ನು ಕೊಡುವ ಮೂಲಕ ದಾಖಲೆ ಮಟ್ಟದ ಮತಗಳಿಂದ ಆಯ್ಕೆಯಾಗಲು ಸಹಕರಿಸಿದರು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಎಮ್.ಜಿ.ಹಂಜಿ, ಅಥಣಿ ಜನತೆಯ ಹಿತ ಚಿಂತನೆ ಮಾಡುತ್ತಿರುವ ಶಾಸಕ ಲಕ್ಷ್ಮಣ ಸವದಿ ಅಥಣಿ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದಾರೆ ಎಂದ ಅವರು ಲಕ್ಷ್ಮಣ ಸವದಿಯವರಂತಹ ಜನಪರ ಶಾಸಕರಿಗೆ ಅಥಣಿ ಜನತೆ ಹಿಂದಿನಂತೆ ಮುಂದೆಯೂ ಸಹಕಾರ ನೀಡಬೇಕು ಎಂದರು.
ಕುಡಿಯುವ ನೀರು ಯೋಜನೆ ಕುರಿತಾಗಿ ಇಲಾಖೆಯ ಉಪ ಕಾರ್ಯನಿರ್ವಾಹಕ ಅಭಿಯಂತರ ಆರ್.ಕೆ.ಉಮೇಶ ಮಾತನಾಡಿದರು, ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ಸಾಂಗಲಿಯ ಸಹ್ಯಾದ್ರಿ ಕನ್ಸಟ್ರಕ್ಷನ್ಸ ಚಂದ್ರಕಾಂತ ನಲವಡೆ ಇವರು ಶಾಸಕ ಲಕ್ಷ್ಮಣ ಸವದಿಯವರನ್ನು ಮತ್ತು ಪುರಸಭಾ ಸದಸ್ಯರನ್ನು ಸತ್ಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಬಿಬಿಜಾನ ತಾಂಬೋಳಿ, ಕಲ್ಲಪ್ಪ ಮಡ್ಡಿ, ಸಂತೋಷ ಸಾವಡಕರ, ದತ್ತಾ ವಾಸ್ಟರ್, ಭುವನೇಶ್ವರಿ ಯಂಕಂಚಿ, ಶಾಂತಾ ಲೋಣಾರೆ, ಲತಾ ಭಜಂತ್ರಿ, ರಮೇಶ ಪವಾರ, ಬಸವರಾಜ ಪಾಟೀಲ, ಮಲ್ಲೇಶ ಹುದ್ದಾರ, ಮೃಣಾಲಿನಿ ದೇಶಪಾಂಡೆ, ರಿಯಾಜ ಸನದಿ, ರಾಜಶೇಖರ ಗುಡೋಡಗಿ, ವಿದ್ಯಾ ಬುಲಬುಲೆ, ಜುಲೆಖಾಬಿ ಖೆಮಲಾಪುರ, ವಿದ್ಯಾ ಹಳ್ಳದಮಳ, ಬಸವರಾಜ ನಾಯಿಕ ಸೇರಿದಂತೆ ಅಥಣಿ ಪಟ್ಟಣದ ಅನೇಕ ಧುರೀಣರು, ಸರಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.