ವ್ಯಕ್ತಿ, ಹಸು ಮೇಲೆ ಕತ್ತೆಕಿರುಬ ದಾಳಿ
ಯರಗಟ್ಟಿ 27: ಸಮೀಪದ ಬೂದಿಗೊಪ್ಪ ಗ್ರಾಮದ ಕರೆಮ್ಮ ದೇವಸ್ಥಾನ ಸಮೀಪದ ತೋಟದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕತ್ತೆಕಿರುಬ ಶುಕ್ರವಾರ ದಾಳಿ ನಡೆಸಿದೆ.
ನಾಯಕಪ್ಪ ಭೀಮಪ್ಪ ಹಿಮ್ಮಡಿ ಅವರು ರಾತ್ರಿ ತೋಟಕ್ಕೆ ನೀರು ಹಾಯಿಸುವಾಗ ಘಟನೆ ನಡೆದಿದೆ. ದಾಳಿಯಲ್ಲಿ ಅವರ ಕಣ್ಣು, ಮೂಗು, ಕುತ್ತಿಗೆ, ಮುಖ ಸೇರಿದಂತೆ ದೇಹದ ಅಲ್ಲಲ್ಲಿ ಪರಚಿದ ಗಾಯಾಗಳಾಗಿವೆ. ಸ್ಥಳೀಯರು ಯರಗಟ್ಟಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಯಾವುದೇ ಪ್ರಾಣಾಪಾಯವಿಲ್ಲವೆಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಹಸು ಮೇಲೆ ದಾಳಿ: ತೋಟದ ಮನೆ ಹತ್ತಿರ ಕಟ್ಟಿದ್ದ ಹಸುವಿನ ಮೇಲೆಯೂ ಕತ್ತೆಕಿರುಬ ದಾಳಿ ನಡೆಸಿದೆ. ಹಸುವಿಗೆ ಯರಗಟ್ಟಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ನಾಯಕಪ್ಪ ನಿವಾಸಕ್ಕೆ ಉಪವಲಯ ಅರಣ್ಯಾಧಿಕಾರಿ ಶರಣಪ್ಪ ಹಟ್ಟೆನ್ನವರ ಹಾಗೂ ಗಸ್ತುಪಾಲಕ ಹನಮಂತ ದಿಡಗನ್ನವರ ಭೇಟಿ ನೀಡಿ, ಇಲಾಖೆಯಿಂದ 1 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು.
ಯರಗಟ್ಟಿ, ‘ಸವದತ್ತಿ, ರಾಮದುರ್ಗ, ಗೋಕಾಕ ತಾಲ್ಲೂಕುಗಳ ಅರಣ್ಯ ಪ್ರದೇಶದಲ್ಲಿ 500ಕ್ಕೂ ಅಧಿಕ ಕತ್ತೆ ಕಿರುಬಗಳಿವೆ. ಆಹಾರ, ನೀರು ಅರಸಿ ಕಾಡಿನಿಂದ ಹೊರಬರುವ ಸಾಧ್ಯತೆಯಿದೆ. ಕಾಡಂಚಿನ ಗ್ರಾಮಗಳ ಜನರು ರಾತ್ರಿ ವೇಳೆ ಎಚ್ಚರ ವಹಿಸಬೇಕು’ ಎಂದು ಆರ್ಎಫ್ಒ ಶಂಕರ ಅಂತರಗಟ್ಟಿ ಮಾಹಿತಿ ನೀಡಿದರು.
ಈ ಭಾಗದಲ್ಲಿ ಇತ್ತಿಚಿನ ದಿನಗಳಲ್ಲಿ ಬೂದಿಗೊಪ್ಪ ಗ್ರಾಮದ ಪುಲಿ ತೋಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕತ್ತೆಕಿರುಬಗಳ ದಾಳಿ ಹೆಚ್ಚಾಗಿದೆ. ಹಾಗಾಗಿ ಈ ಭಾಗದಲ್ಲಿ ಕತ್ತೆಕಿರುಬದ ಸಂತತಿ ಹೆಚ್ಚಿದೆ. ಈ ಪ್ರಾಣಿ ಅಳಿವಿನ ಅಂಚಿನಲ್ಲಿರುವ ವನ್ಯಜೀವಿಯಾಗಿದೆ. ನಮ್ಮ ಭಾಗದ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕತ್ತೆಕಿರುಬದ ಪಾರ್ಕ್ ಮಾಡಿದರೆ ಸೂಕ್ತ ವಾಗುವುದು.
ಮಾರುತಿ ಕೊಪ್ಪದ
ಬೂದಿಗೊಪ್ಪ ನಿವಾಸಿ