ಕಾರವಾರ

ಚಂಡ ಮಾರುತ: ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕಿ ಭೇಟಿ

ಚಂಡ ಮಾರುತ: ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕಿ ಭೇಟಿ

ಕಾರವಾರ 18: ತೌಕ್ತೆ ಚಂಡ ಮಾರುತದಿಂದ  ಹಾನಿಯಾದ ಕಾರವಾರ-ಅಂಕೋಲಾ ತಾಲ್ಲೂಕಿನ ಪ್ರದೇಶಗಳಿಗೆ ಶಾಸಕರಾದ  ರೂಪಾಲಿ ಎಸ್‌.ನಾಯ್ಕ ಭೇಟಿ ನೀಡಿದರು.  ಜನರ ಕಷ್ಟಗಳನ್ನು ಆಲಿಸಿ, ಸಂತ್ರಸ್ತರಿಗೆ ಯಾವುದೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಕಾರವಾರ ತಾಲ್ಲೂಕಿನ ಆಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದಗಾ ಗ್ರಾಮದಲ್ಲಿ ಚಂಡಮಾರುತದಿಂದ ಹಾನಿಯಾದ  ಪ್ರದೇಶಕ್ಕೆ ಭೇಟಿ ನೀಡಿ ಹಾನಿಯಾದ ಮನೆಗಳ ಸರ್ವೇ ಕಾರ್ಯವನ್ನು ಸರಿಯಾಗಿ ಮಾಡಬೇಕು. ಜನರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ದೋಣಿ, ಬಲೆ ಹಾನಿ ವಿವರವನ್ನು ನೀಡಬೇಕು. ಕೊರೊನಾ ಕಾಲದಲ್ಲಿಯೂ  ಮತ್ತಷ್ಟು ಸಂಕಟವನ್ನು ಮೀನುಗಾರರು ಅನುಭವಿಸುತ್ತಿದ್ದಾರೆ. ಹಿಂದಿನ ಬಾರಿಯೂ ಸರಿಯಾಗಿ ಸರ್ವೆಯಾಗದೇ ಮೀನುಗಾರ ಸಮುದಾಯ ಅನ್ಯಾಯಕ್ಕೆ ಒಳಗಾಗಿದ್ದಾರೆ. 

ಈ ಸರ್ವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವಾಗಬಾರದು ಎಂದು ಪಿಡಿಒ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಎಚ್ಚರಿಸಿದರು.ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೌಕ್ತೆ ಚಂಡ ಮಾರುತದಿಂದ ಹಾನಿಯಾದ ತರಂಗಮೇಟ್, ಗಾಬಿತವಾಡ ಹಾಗೂ ಭಾವಿಕೇರಿ ಗ್ರಾಮ ಪಂಚಾಯ್ತಿಯ ಗಾಬಿತಕೇಣಿ ಪ್ರದೇಶಗಳಿಗೆ ಭೇಟಿ ನೀಡಿದರು. ಗಾಬಿತ ಕೇಣಿಯಲ್ಲಿ ಒಂದು ಕೋಟಿ ರೂಪಾಯಿ ಯಲ್ಲಿ ನೆರೆ ಹಾನಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನ ಹಲವು ಪ್ರದೇಶದಲ್ಲಿ  ಸಮುದ್ರ ಪ್ರತಿಬಂಧಕ ಇಲ್ಲದೇ ಕಡಲ ತೀರ ಪ್ರದೇಶದ ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಅದಕ್ಕಾಗಿ ಸಮುದ್ರ ಪ್ರತಿಬಂಧಕ ನಿರ್ಮಾಣ ಅವಶ್ಯಕವಾಗಿದೆ. ಮೀನುಗಾರಿಕೆ ದೋಣಿ ಕೊಂಡೊಯ್ಯಲು ಸಹ ರ್ಯಾಂಪ್ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಯಾವ ಯಾವ ಮನೆಗಳಿಗೆ ನೀರು ನುಗ್ಗಿದೆ, ತೋಟಗಾರಿಕಾ ಪ್ರದೇಶ ಹಾನಿ, ಮೀನುಗಾರಿಕೆ ದೋಣಿ, ಬಲೆ ಹಾನಿಯ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು. ಸಮುದ್ರ ಪ್ರತಿಬಂಧಕ ನಿರ್ಮಾಣದ ವಿವರವನ್ನು ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಆಮದಳ್ಳಿ ಮತ್ತು ಹಾರವಾಡ ಗ್ರಾಮ ಪಂಚಾಯತಿ ಅಧ್ಯಕ್ಷರು, ತಹಶೀಲ್ದಾರ, ತಾಲ್ಲೂಕು ಪಂಚಾಯತ  ಇಓ,   ಪೋಲಿಸ್ ಸಿಬ್ಬಂದಿ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ