ಗೋಕಾಕ್

ಬಸವಧರ್ಮ ಯುಗ ಧರ್ಮದ ಮಾನವ ಧರ್ಮ : ರಂಜಾನ್ ದರ್ಗಾ

ಬಸವಧರ್ಮ ಯುಗ ಧರ್ಮದ ಮಾನವ ಧರ್ಮ : ರಂಜಾನ್ ದರ್ಗಾ

ಗೋಕಾಕ್‌ 26: ಬಸವ ಧರ್ಮವು ಯುಗ ಧರ್ಮದ ಕರೆಗೆ ಓಗೊಡುವ ಮಾನವ ಧರ್ಮವಾಗಿದೆ ಎಂದು ಪತ್ರಕರ್ತ ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಿಸಿದ್ದಾರೆ. 

ಅವರು ಗೋಕಾಕ್‌ದ ಶೂನ್ಯ ಸಂಪಾದನ ಮಠದಲ್ಲಿ ಹಮ್ಮಿಕೊಂಡ 175ನೇ ಹುಣ್ಣಿಮೆ ವಿಶೇಷ ಶಿವಾನುಭವ ಗೋಷ್ಠಿಯಲ್ಲಿ 21ನೇ ಶತಮಾನಕ್ಕೆ “ಬಸವ ತತ್ವ” ವಿಷಯ ಕುರಿತು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.  

ರಕ್ತ ರಹಿತ ಕ್ರಾಂತಿಯ ತಿಳುವಳಿಕೆಯನ್ನು ಬಸವಣ್ಣ ಜಗತ್ತಿಗೆ ತೋರಿಸಿಕೊಟ್ಟರು. ಬಿಜ್ಜಳನ ಪ್ರಧಾನಿಯಾಗಿದ್ದ ಅವರು ಧರ್ಮ ಮತ್ತು ರಾಜಕಾರಣವನ್ನು ಬೆರೆಸಲಿಲ್ಲ. ಆದರೆ ತತ್ವ ಎಂಬುದು ಧರ್ಮ, ಸಮಾಜ ಮತ್ತು ರಾಜಕಾರಣಕ್ಕೆ ಮೂಲಾಧಾರವಾಗಿರುತ್ತದೆಂಬುದನ್ನು ಸೂಚಿಸಿದರು. ಇಂತಹ ಬಸವಧರ್ಮ ವಿಶ್ವಧರ್ಮವಾಗಿ ಬೆಳೆಯಬೇಕಾದ ಅಗತ್ಯವಿದೆ ಎಂದುತಿಳಿಸುತ್ತಾ, ಒಂದಿಲ್ಲಾ ಒಂದು ದಿನ ಈ ಭೂಮಿಯ ಮೇಲೆ ಬಸವ ರಾಜ್ಯದ ಉದಯವಾಗುವುದು ಖಂಡಿತ ಎಂದು ಸರ್ವಜ್ಞನ ಭವಿಷ್ಯದ ವಾಣಿಯನ್ನ ಎತ್ತಿ ಹಿಡಿದು ಮಾತನಾಡಿದರು.  

ಬಸವಣ್ಣನ ತತ್ವಗಳು ಎಲ್ಲೆಡೆ ಕಾಣಿಸಿಕೊಳ್ಳುವುವು, ಭೂಮಿ ಬಸವಣ್ಣನ ವರವಾಗುವುದು. ಆ ದಿನ ಬೇಗ ಬರಲೆಂದು ರಂಜಾನ್ ದರ್ಗಾ ಆಶಿಸಿದರು.  

ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ, ಆಶೀರ್ವದಿಸಿದರು. ಬಸವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಡಾ.ಸಿ.ಕೆ ನಾವಲಗಿ ಪ್ರಸ್ತಾವನೆ ಮತ್ತು ಪರಿಚಯಿಸಿದರು. ಲಿಂಗಾಯತ ಮಹಿಳಾ ವೇದಿಕೆಯವರು ಪ್ರಾರ್ಥಿಸಿದರು. ಚನ್ನಬಸವೇಶ್ವರ ವಿದ್ಯಾಪೀಠದ ಶಾಲಾ ಮಕ್ಕಳಿಂದ ಸಂಗೀತ ಸೇವೆ ಸಂದಿತು. ಶೈಲಾಬಿದರಿ, ಎಸ್‌.ಎಸ್ ಅಂಗಡಿ, ಅಡವೀಶ ಗವಿಮಠ, ಪ್ರೊ. ಬಿ.ಎನ್ ಹುಲಗುಂದ, ಭಾರತಿ ಮಾದಭಾವಿ, ಸುಶೀಲಾ ಹಿತ್ತಲಮನಿ ಉಪಸ್ಥಿತರಿದ್ದರು. ಎಸ್ ಕೆ ಮಠದ ನಿರೂಪಿಸಿದರು. ಆರ್ ಎಲ್ ಮಿರ್ಜಿ ವಂದಿಸಿದರು. 


ಸುದ್ದಿ ಓದಿ