75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಪಾದಯಾತ್ರೆ
ಶಿಗ್ಗಾವಿ 08: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಆಚರಣೆಯ ಅಂಗವಾಗಿ ಶಿಗ್ಗಾವಿ, ಸವಣೂರು ಕ್ಷೇತ್ರದ ಎರಡೂ ಯುತ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಪಾದಯಾತ್ರೆ ಮಾಡುವ ಮೂಲಕ 75 ಸಸಿಗಳನ್ನ ನೆಡುವ ಐತಿಹಾಸಿಕ ಕಾರ್ಯಕ್ರಮ ಮಾಡಲು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದು ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದಿಂದ ಹಿರಿಯ ನ್ಯಾಯವಾದಿಗಳು ಮುಖಂಡರು ಪಕ್ಷದ ಕಾರ್ಯಕರ್ತರು ಸಭೆಗೆ ಆಗಮಿಸಿ ಹಲವಾರು ಸಲಹೆ ಸೂಚನೆಗಳನ್ನ ನೀಡಿದ್ದಾರೆ, ದೇಶ ನಮಗೇನು ಮಾಡಿತು ಎನ್ನುವುದಕ್ಕಿಂತ ದೇಶಕ್ಕೆ, ನಾವೇನು ಮಾಡಿದ್ದೇವೆ ಎನ್ನುವುದನ್ನ ತೋರಿಸಿಕೊಡುವಂತಹ ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದ್ದೇವೆ, ಕ್ಷೇತ್ರದ ಬಡವರಿಗೆ ಕೂಲಿ ಕಾರ್ಮಿಕರಿಗೆ, ದೇಶ ಪ್ರೇಮಿಗಳಿಗೆ ವಿವಿಧ ಸಮಾಜಗಳ ಮುಖಂಡರುಗಳಿಗೆ ಸಹಕಾರ ನೀಡಲು ಮನವಿ ಮಾಡಿಕೊಳ್ಳುತ್ತೇವೆ ಶಿಗ್ಗಾವಿ ಸವಣೂರು ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಎರಡು ಹಂತದ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಒಂದನೇ ಹಂತವಾಗಿ ಇದೇ ಆ. 11 ರಂದು ಬೆಳಗ್ಗೆ ಒಂಬತ್ತು ಗಂಟೆಗೆ ಹುಲಗೂರಿನಿಂದ ಪಾದಯಾತ್ರೆ ಪ್ರಾರಂಭವಾಗಿ ಮಾಕಾಪುರ, ಕಾರಡಗಿ, ಚಿಲ್ಲೂರುಬಡ್ನಿ ಮಾರ್ಗವಾಗಿ ಸವಣೂರಿಗೆ ಆಗಮಿಸಿ ಸಮಾರೋಪ ಗೊಳ್ಳುವುದು, ಎರಡನೇ ಹಂತವಾಗಿ ಆ. 13 ರಂದು ಬೆಳಗ್ಗೆ ಒಂಬತ್ತು ಗಂಟೆಗೆ ಬಂಕಾಪುರದಿಂದ ಪಾದಯಾತ್ರೆ ಪ್ರಾರಂಭವಾಗಿ ಸದಾಶಿವಪೇಟೆ ನಾರಾಯಣಪುರ ಬಾಡ ಕಲ್ಯಾಣ ಮಾರ್ಗವಾಗಿ ಶಿಗ್ಗಾವಿ ಪಟ್ಟಣದಲ್ಲಿ ಸಮಾರೋಪಗೊಳ್ಳುವುದು ಎಂದರು.
ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಮಾಡಲಾಗುತ್ತಿದ್ದು ಎಲ್ಲರೂ ಭಾಗವಹಿಸಿ ಬೆಂಬಲ ನೀಡಬೇಕು, ದೇಶಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು ದೇಶದ ಐಕ್ಯತೆ ಅಖಂಡತೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಈ ಭೂಮಿಯ ಮೇಲೆ ಮಾನವ ಎಲ್ಲಿಯವರೆಗೂ ಇರುತ್ತಾನೋ ಅಲ್ಲಿಯವರೆಗೂ ಸಂವಿಧಾನ ಅಮರವಾಗಿರಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ ಅದರಿಂದ ಈ ಕಾರ್ಯಕ್ರಮ ಐತಿಹಾಸಿಕ ಹಾಗೂ ಮಾದರಿ ಕಾರ್ಯಕ್ರಮ ಆಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಆದ್ದರಿಂದ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡರಾದ ಚಂದ್ರಣ್ಣ ನಡುವಿನಮನಿ, ಡಾ. ಪಕ್ಕೀರಗೌಡ ಪಾಟೀಲ, ಎಸ್.ಎಫ್.ಮಣಕಟ್ಟಿ, ಎಸ್ ಬಿ ಪಾಟೀಲ, ಬಸವರಾಜ್ ಸಾಲಿ, ಹನುಮಂತ ಬಂಡಿವಡ್ಡರ, ಸಲೀಂ ಫಾರೂಕಿ, ಮಲ್ಲಿಕಾರ್ಜುನಗೌಡ ಪಾಟೀಲ, ರಬ್ಬಾನಿ ತರಿನ್, ಕು. ವಸಂತಾ ಬಾಗೂರ, ಗೌಸ್ಕಾನ್ ಮನಸಿ, ಶಬ್ಬೀರ ಮಕಾಂದರ್, ಮಂಜುನಾಥ್ ತಿಮ್ಮಾಪುರ, ಮಾಲತೇಶ ಸಾಲಿ, ರಫೀಕ್ ಖಾಜಿ, ಶಂಬು ನೆರ್ತಿ, ಸೇರಿದಂತೆ ಪಕ್ಷದ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.