ಕೋಳಿ ಸಾಕಾಣಿಕೆ ಉದ್ಯಮದಿಂದ ಹೆಚ್ಚಿನ ಆದಾಯ: ಅಡಕಿ
ಇಂಡಿ 2: ಕಡಿಮೆ ಬಂಡವಾಳ ತೊಡಗಿಸಿ ಅಲ್ಪ ಸಮಯದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಉದ್ಯಮ ಯಾವುದಾದರು ಇದ್ದರೆ ಅದು ಕೋಳಿ ಸಾಕಾಣಿಕೆಯಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಪಟ್ಟಣದ ರೈಲು ನಿಲ್ದಾಣ ರಸ್ತೆಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ವೈಜ್ಞಾನಿಕ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋಳಿ ಸಾಕಾಣೆಕೆ ಕುರಿತು ಸರಿಯಾದ ಮಾಹಿತಿ ಇರದೇ ಇದ್ದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ವಿಜಯಪುರ ಜಿಲ್ಲೆ ಸುತ್ತಮುತ್ತ ಕೋಳಿ ಮೊಟ್ಟೆ ಮತ್ತು ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಕೋಳಿ ಸಾಕಾಣಿಕೆಯನ್ನು ಮಾಡಲು ಮುಂದೆ ಬರುತ್ತಿದ್ದಾರೆ. ರೈತರಿಗೆ ಸರಿಯಾಗಿ ಮಾಹಿತಿ ಸಿಗದೆ ಇರುವುದರಿಂದಾಗಿ ಬಹಳಷ್ಟು ಜನರು ಕೋಳಿ ಸಾಕಾಣಿಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ಇಂದು ಇಂತಹ ತರಬೇತಿ ಪಡೆದುಕೊಂಡು ಸಾವಲಂಬಿ ಬದುಕು ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಹಿರಿಯ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಬಿ. ನೆಗಳೂರ ಮಾತನಾಡಿ ಎಲ್ಲಾ ಶಿಬಿರಾರ್ಥಿಗಳಿಗೆ ಕೋಳಿ ಸಾಕಾಣಿಕೆ ಒಂದು ಉಪಕಸುಬಾಗಿ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾದ ಉದ್ಯಮವಾಗಿದೆ. ಆದ್ದರಿಂದ ರೈತರು, ವಿದ್ಯಾವಂತ ಯುವಕರು ಕೂಡಾ ಕೋಳಿ ಸಾಕಾಣಿಕೆ ಮಾಡಿ ಹೆಚ್ಚಿನ ಲಾಭ ಪಡೆದುಕೊಂಡು ಹೆಚ್ಚಿನ ಕೌಶಲ್ಯವನ್ನು ಪಡೆಯಬೇಕು. ಇದು ಒಂದು ಉತ್ತಮ ತರಬೇತಿಯಾಗಿದ್ದು ಎಲ್ಲಾ ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಶು ವಿಜ್ಞಾನಿ ಡಾ. ಸಂತೋಷ ಶಿಂದೆ ತರಬೇತಿಯ ಮುಖ್ಯ ಉದ್ದೇಶಗಳು, ಪ್ರಮುಖ ಕೋಳಿ ತಳಿಗಳು, ಕೋಳಿ ಆಹಾರ ತಯಾರಿಕೆ, ಅಝೋಲ್ಲಾ ಮತ್ತು ಇನ್ನಿತರ ವಿಷಯದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ನಂತರ ಪ್ರಾಯೋಗಿಕವಾಗಿ ಕೆ.ವಿ.ಕೆ. ಫಾರ್ಮನಲ್ಲಿ ಕೋಳಿ ಸಾಕಾಣಿಕೆ ಘಟಕಕ್ಕೆ ಭೇಟಿ ನೀಡಿ ಕೋಳಿ ಮರಿಗಳಿಗೆ ಕಾವು ಕೊಡುವುದರ ಬಗ್ಗೆ, ಆಹಾರ ನೀಡುವುದರ ಬಗ್ಗೆ, ಲಸಿಕೆ ಹಾಕುವುದರ ಬಗ್ಗೆ ಮತ್ತು ವಿವಿಧ ಅಝೋಲ್ಲಾ ತಯಾರಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ವೈಜ್ಞಾನಿಕವಾಗಿ ಕೋಳಿ ಸಾಕಾಣಿಕೆ ಮಾಡಿದಲ್ಲಿ ಸುಸ್ಥಿರ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಪ್ರಗತಿ ಪರ ರೈತರಾದ ಅರವಿಂದ ಕೊಪ್ಪ, ಡಾ. ರವಿ ವೈ. ವಿಜ್ಞಾನಿ (ಗೃಹ ವಿಜ್ಞಾನ), ಡಾ. ಹೀನಾ ಎಂ. ಎಸ್. ವಿಜ್ಞಾನಿ (ತೋಟಗಾರಿಕೆ) ಮತ್ತು ಡಾ. ಸೈಯದಾ ಸಮೀನಾ ಅಂಜುಂ ವಿಜ್ಞಾನಿ (ಸಸ್ಯ ರೊಗ ಶಾಸ್ತ್ರ) ಇವರು ಉಪಸ್ಥಿತರಿದ್ದರು. ಡಾ. ಸವಿತಾ ಬಿ ವಿಜ್ಞಾನಿ ವಂದಿಸಿದರು.