ಹೆಲ್ಮೆಟ್ ಜೀವ ರಕ್ಷಿಸುವ ಕವಚ! ಧರಿಸಿ ಸುರಕ್ಷಿತವಾಗಿರಿ: ಪಿಎಸ್‌ಐ ಮಂಜುನಾಥ ಗೌಡರ
ಲೋಕದರ್ಶನ ವರದಿ
ಮುಂಡಗೋಡ 12 : ಹೆಲ್ಮೆಟ್ ಧರಿಸದೇ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಮುಂಡಗೋಡ ಪೊಲೀಸರು ಬಿಗಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನದಲ್ಲಿ ಸುಮಾರು 40 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆ ಎದುರು ಹಾಗೂ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದ ವಿಶೇಷ ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಗುರುತಿಸಿ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಯಿತು. ಹೆಲ್ಮೆಟ್ ಧರಿಸಿ : ಪಟ್ಟಣದಲ್ಲಿ ಬೈಕ್ ಸವಾರರಿಗೆ ಹೆಲೈಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಸೇವನೆ, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಹೀಗಾಗಿ ಬೈಕ್ ಸವಾರರು ಚಾಲನೆ ಮಾಡುವಾಗ ತಲೆಗೆ ಹೆಲ್ಮೆಟ್ ಧರಿಸುವುದರಿಂದ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೂ ತಲೆಗೆ ಪೆಟ್ಟು ಬೀಳದಂತೆ ಸುರಕ್ಷತೆ ಕಾಪಾಡಿಕೊಳ್ಳಬಹುದು. ಅಂತೆಯೇ ದ್ವಿಚಕ್ರಗಳಲ್ಲಿ ಹಿಂಬದಿಯಲ್ಲಿ ಕುಳಿತು ಸಂಚರಿಸುವ ವ್ಯಕ್ತಿಯೂ ಹೆಲ್ಮೆಟ್ ಧರಿಸಬೇಕು ಎಂದರು. ಪಟ್ಟಣದಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜೊತೆಗೆ ತಮ್ಮಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಪಿಎಸ್‌ಐ ಮಂಜುನಾಥ ಗೌಡರ ತಿಳಿಸಿದ್ದಾರೆ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವಿಶೇಷ ತಪಾಸಣೆ ಮತ್ತು ಜಾಗೃತಿ ಅಭಿಯಾನಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.