ಡೋಣಿ ನದಿಯಲ್ಲಿ ಭಾರಿ ಪ್ರವಾಹ: ಡೋಣಿ ಸೇತುವೆ ಮುಳಗಡೆ ಪ್ರಯಾಣಿಕರ ಪರದಾಟ
ತಾಳಿಕೋಟೆ 30: ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿ ತುಂಬಿ ಹರಿಯುತ್ತಿದ್ದು ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ 61 ರಲ್ಲಿರುವ ಸೇತುವೆ ಮುಳಗಡೆ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.
ಪಟ್ಟಣದಲ್ಲಿ ಹಾದು ಹೋಗುವ ಬಿಜ್ಜಳ ರಾಜ್ಯ ಹೆದ್ದಾರಿ 61 ರಲ್ಲಿರುವ ಮೇಲ್ಮಟ್ಟದ ಸೇತುವೆ ಶಿಥಿಲವಾಗಿದ್ದರಿಂದ ಸೇತುವೆ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಬ್ರೀಟಿಷರ್ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸೇತುವೆ ಮೇಲೆ ಪರ್ಯಾಯ ರಸ್ತೆ ಮಾಡಲಾಗಿದೆ. ಶನಿವಾರ ಬೆಳಿಗ್ಗೆಯಿಂದ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದರಿಂದ ಕೆಳಮಟ್ಟದ ಸೇತುವೆಯೂ ಕೂಡಾ ಮುಳಗಡೆ ಆಗಿ ಅಲ್ಲಿಯೂ ಸಂಚಾರ ಬಂದ್ ಮಾಡಲಾಗಿದೆ. ಡೋಣಿ ನದಿಗೆ ಹಡಗಿನಾಳ ಮಾರ್ಗದಲ್ಲಿ ನೆಲಮಟ್ಟದ ಸೇತುವೆ ರಾತ್ರಿಯೇ ಸಂಚಾರ ಸ್ಥಗಿತವಾಗಿದೆ. ಇದಕ್ಕೆ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ನೂತನ ಮೇಲ್ಸೇತುವೆ ಕಾರ್ಯ ಮುಕ್ತಾಯವಾಗಿದ್ದರೂ ರಸ್ತೆ ಜೋಡಣೆ ಕಾರ್ಯ ಮುಗಿದಿಲ್ಲ ಇದರಿಂದ ಅಲ್ಲಿಯೂ ಸಹ ಸಂಚಾರ ಇಲ್ಲವಾಯಿತು. ಇದರಿಂದ ತಾಳಿಕೋಟೆ ಪಟ್ಟಣದಿಂದ ಜಿಲ್ಲಾ ಕೇಂದ್ರಗಳಾದ ವಿಜಯಪುರ, ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಪಟ್ಟಣಕ್ಕೆ ಆಗಮಿಸುವ ಪ್ರಯಾಣಿಕರು ಸಂಪರ್ಕ ಇಲ್ಲದೇ ಪರದಾಟ ನಡೆಸುವಂತಾಯಿತು. ಪ್ರಯಾಣಿಕರ ಅನಕೂಲಕ್ಕಾಗಿ ಶಿಥಿಲಗೊಂಡ ಮೇಲ್ಸುತೆವೆ ಮೇಲೆ ಬೈಕ್ಗಳು ಹಾಗೂ ಜನರ ಸಂಚಾರ ಆರಂಭಿಸಲಾಯಿತು. ಇದರಿಂದ ಪ್ರಯಾಣಿಕರು ನಡೆದುಕೊಂಡು ಸೇತುವೆ ಮೇಲೆ ಡೋಣಿ ನದಿ ದಾಟಿ ಖಾಸಗಿ ವಾಹನಗಳನ್ನು ಹಿಡಿದುಕೊಂಡು ಪಟ್ಟಣ ಸೇರುವಂತಾದರೆ ಸ್ವಂತ ವಾಹನ ಇರುವವರು ಪಟ್ಟಣದಿಂದ ವಿಜಯಪುರ ಹೋಗಲು ದೇವರ ಹಿಪ್ಪರಗಿಯಿಂದ, ಬಾಗಲಕೋಟೆಯತ್ತ ಹೋಗುವವರು ಕೊಡೆಕಲ್ಲ, ನಾರಾಯಣಪೂರ ಮಾರ್ಗವಾಗಿ ಸುತ್ತವರೆದು ಸಂಚಾರ ಮಾಡಿದರೆ ಬಸ್ ಅವಲಂಭಿಸಿದವರು ಪರದಾಟ ನಡೆಸುವಂತಾಯಿತು.
ಡೋಣಿ ನದಿಯಲ್ಲಿ ಪ್ರವಾಹ ಬಂದರೆ ಸುಮಾರು 2-3 ದಿನಗಳ ಕಾಲ ಪ್ರವಾಹ ನಿರಂತರವಾಗಿ ಇರುವದರಿಂದ ಮಧ್ಯಾಹ್ನದ ಹೊತ್ತಿಗೆ ಹಡಗಿನಾಳ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅನಕೂಲವಾಗುವಂತೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಯಿತು. ಇದರಿಂದ ಬಸ್, ಕಾರ್ ಸೇರಿದಂತೆ ಕೇಲ ವಾಹನಗಳ ಸಂಚಾರಕ್ಕೆ ಅನಕೂಲ ಕಲ್ಪಿಸಲಾಯಿತು. ಆದರೆ ಹಡಗನಾಳ ಮೂಕಿಹಾಳ ರಸ್ತೆ ಸಂಪೂರ್ಣ ಮಣ್ಣಿನ ಗರಸು ಹಾಕಿ ನಿರ್ಮಾಣ ಮಾಡಲಾಗಿದೆ. ಒಂದು ವೇಳೆ ಮಳೆ ಆರಂಭವಾದರೆ ಅಲ್ಲಿಯೂ ಸಹ ಸಂಚಾರ ದುಸ್ತರವಾಗಲಿದೆ. ಸೇತುವೆ ಶಿಥಿಲವಾಗಿ ವರ್ಷ ಕಳೆದಿದೆ. ಅಧಿಕಾರಿಗಳಿಗೆ ಡೋಣಿ ನದಿ ಪ್ರವಾಹದ ಸ್ಥಿತಿ ಗೊತ್ತಿದ್ದರೂ ಸಹಿತ ಯಾವುದೇ ಮುಂಜಾಗ್ರತಾ ಕ್ರಮ ಕೈಕೊಳ್ಳದ್ದಿದ್ದರಿಂದ ಪರದಾಡುಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.