ಅಬಕಾರಿ ನಿರೀಕ್ಷಕರಾಗಿ ಹನುಮಂತಪ್ಪ ಪಟಾತ್ ನೇಮಕ: ಸನ್ಮಾನ
ರಾಣೇಬೆನ್ನೂರು 08: ಅಬಕಾರಿ ಇಲಾಖೆಗೆ ನೂತನವಾಗಿ ಅಬಕಾರಿ ನಿರೀಕ್ಷಕರಾಗಿ ನೇಮಕಗೊಂಡ ಹನಮಂತಪ್ಪ .ಕ. ಪಟಾತ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಯುವ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಲಮಾಣಿ ಮಾತನಾಡಿ ತಾಲೂಕಿನಾದ್ಯಂತ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮತ್ತು ಬ್ರಾಂದಿ ಮಾರಾಟವಾಗುತ್ತಿದ್ದರಿಂದ ಯುವ ಜನತೆ ಹಾಳಾಗುತ್ತಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಬೀಡಾ ಅಂಗಡಿ, ಕಿರಾಣಿ ಅಂಗಡಿ ಹಾಗೂ ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಮದ್ಯವು ಹೇರಳವಾಗಿ ದೊರೆಯುತ್ತಿದೆ. ಸಾರಾಯಿ ತರಲು ಚಿಕ್ಕ ಚಿಕ್ಕ ಶಾಲಾ ಮಕ್ಕಳನ್ನು ಕಳುಹಿಸುತ್ತಿದ್ದರಿಂದ ಬಾಲಕರೂ ಸಹ ಹಾಳಾಗುತ್ತಿರುವುದು ದುರಂತದ ಸಂಗತಿ. ಅಷ್ಟೇ ಅಲ್ಲದೆ ಮಾನದಂಡದ ಪ್ರಕಾರ ಶಾಲೆ, ದೇವಸ್ಥಾನಗಳಿಂದ ಇಂತಹ ಅಕ್ರಮ ಮಾರಾಟ ಮಾಡುವ ಅಂಗಡಿಗಳು 100 ಮೀಟರ್ ದೂರವಿರಬೇಕೆಂಬ ನಿಯಮವಿದೆ. ಆ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು.
ಹೊಸದಾಗಿ ತಾಲೂಕಿನ ಅಬಕಾರಿ ಇಲಾಖೆಗೆ ನೇಮಕಗೊಂಡಿರುವ ಅಬಕಾರಿ ಸಿಪಿಐ ಹನುಮಂತಪ್ಪ ಪಟಾತ ಅವರು ಕಡಕ್ ನಿರ್ಧಾರ ತೆಗೆದುಕೊಳ್ಳುವ ದಕ್ಷ ವ್ಯಕ್ತಿಯಾಗಿರುವುದರಿಂದ ಇಂತಹ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಿ ಯುವ ಜನತೆಯನ್ನು ಮದ್ಯವ್ಯಸನದಿಂದ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಸ್ವಸ್ಥ ಸಮಾಜ ಮತ್ತು ಸ್ವಸ್ಥ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೃಷ್ಣಮೂರ್ತಿ ಅವರು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬಕಾರಿ ನಿರೀಕ್ಷಕ ಹನುಮಂತಪ್ಪ ಪಟಾತ ಅವರು, ನಾನು ಹೊಸದಾಗಿ ಬಂದಿರುವುದರಿಂದ ಇಲ್ಲಿಯವರೆಗೂ ನನ್ನ ವ್ಯಾಪ್ತಿಯಲ್ಲಿ ಸಾರಾಯಿ, ಬ್ರಾಂದಿ ಮತ್ತು ಬಿಯರ್ ಅಕ್ರಮವಾಗಿ ಮಾರಾಟವಾಗುತ್ತಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಯಾವುದೇ ಹಳ್ಳಿಗಳಲ್ಲಿ ಅಂತಹ ಅಕ್ರಮ ಮಾರಾಟದ ಸುಳಿವು ಸಿಕ್ಕಲ್ಲಿ ಕೂಡಲೇ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವ ವ್ಯಕ್ತಿ ಎಂತಹವರೇ ಆಗಿದ್ದರೂ ಕೂಡ ಅಂತಹವರ ಸುಳಿವನ್ನು ಸಾರ್ವಜನಿಕರೂ ಸಹ ನಮಗೆ ತಿಳಿಸಲು ಮುಂದಾದಾಗ ಮಾತ್ರ ಇಲಾಖೆಗೆ ಸಹಾಯ ನೀಡಿದಂತಾಗುತ್ತದೆ ಎಂದರು.
ಎಲ್ಲಿಯವರೆಗೆ ನಾನು ಈ ತಾಲೂಕಿನಲ್ಲಿರುವೆನೋ, ಅಲ್ಲಿಯವರೆಗೆ ಅಕ್ರಮ ಸಾರಾಯಿ ಮಾರಾಟಕ್ಕೆ ಅನುವು ಮಾಡಿ ಕೊಡುವುದಿಲ್ಲ. ಸಾರ್ವಜನಿಕರೂ ಸಹ ನಮ್ಮೊಂದಿಗೆ ಕೈ ಜೋಡಿಸಿದಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆಗೆ ಕಡಿವಾಣ ಹಾಕಲು ಅತ್ಯಂತ ಸುಲಭವಾಗುತ್ತದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರಾಜನಹಳ್ಳಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪ್ರೇಮಾ ಅಂಗಡಿ, ಸುನಿತಾ ಬಾರ್ಕಿ, ಡಾ.ನಾಗರಾಜ ಚಳಗೇರಿ, ಪೀರು ಪೂಜಾರ, ಡಾಕೇಶ್ ಚವ್ಹಾಣ, ನಾಗರಾಜ ಚವ್ಹಾಣ ಸೇರಿದಂತೆ ಮತ್ತಿತರ ಗಣ್ಯರು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.