ಗುರೂಜಿ ಬಂದರು ಗುರುವಾರ : ವಿನೂತನ ಯೋಜನೆ
ಗೋಕಾಕ 07: ಗೋಕಾವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರರವರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಒಂದಿಲ್ಲ ಒಂದು ಮೌಲಿಕ-ಯೋಜನೆಯನ್ನು ಹಾಕಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿ ಗುರೂಜಿ ಬಂದರು ಗುರುವಾರ ಒಂದು ವಿನೂತನ ಕಾರ್ಯಕ್ರಮ. ಪ್ರತಿ ಗುರುವಾರ ಗುರುಗಳು ವಿದ್ಯಾರ್ಥಿಗಳ ಮನೆಗೆ ತೆರಳಿ ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನು ಆಲಿಸುತ್ತಾರೆ. ವಿದ್ಯಾರ್ಥಿಯ ಹಿಂದುಳಿಯುವಿಕೆಯ ಕಾರಣವನ್ನು ಅರಿತುಕೊಳ್ಳುತ್ತಾರೆ. ಮತ್ತು ಪಾಲಕರ ಜವಾಬ್ದಾರಿಯನ್ನು ತಿಳಿಯಪಡಿಸುತ್ತಾರೆ. ಇದರಿಂದ ಪಾಲಕ-ಬಾಲಕ-ಶಿಕ್ಷಕ ಈ ಮೂವರ ಸಂವಹನದಿಂದ ಉತ್ತಮ ಫಲಿತಾಂಶ ಬರಲು ಇದು ಪರಿಣಾಮಕಾರಿಯಾಗಿದೆ. ಗುರುಗಳು ಮನೆಗೇ ತೆರಳುವುದರಿಂದ ಮಗುವಿನ ಮನೆಯ ಪರಿಸರವನ್ನೂ ತಿಳಿದುಕೊಳ್ಳಲು ಸಹಾಯವಾಗುತ್ತದೆ.
ಅಧಿಕಾರಿಗಳಾದ ಜಿ.ಬಿ ಬಳಿಗಾರ ಈ ಯೋಜನೆಯನ್ನು ಕೇವಲ ಶಿಕ್ಷಕರ ಹೆಗಲಿಗೆ ಮಾತ್ರ ಹಾಕಿಲ್ಲ. ಪ್ರತಿ ಗುರುವಾರ ತಮ್ಮ ಅಧಿಕಾರಿಗಳೊಂದಿಗೆ ತಮ್ಮ ವಲಯದ ಯಾವುದಾದರು ಹಳ್ಳಿಗೆ ತೆರಳಿ ಮಕ್ಕಳ ಮನೆಗೆ ತೆರಳಿ ವಿದ್ಯಾರ್ಥಿಯೊಂದಿಗೆ ಬೆರೆಯುತ್ತಾರೆ. ವಿಶೇಷವೆಂದರೆ ಅವರು ಅಧಿಕಾರಿಯಾಗಿ ಹೋಗದೆ ಓರ್ವ ಸಹೋದರನಾಗಿ, ಒಬ್ಬ ಬಂಧುವಾಗಿ ಅದು ಗುಡಿಸಲಾದರೂ ಸರಿ ನೆಲಹಾಸಿಗೆಯ ಮೇಲೆ ಪರಿವಾರದೊಂದಿಗೆ ಕುಳಿತು ಮಾತನಾಡುತ್ತಾರೆ. ವಿಶೇಷವೆಂದರೆ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ಅಂಕಗಳಿಸುವ ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಮಗು ಮಾನಸಿಕವಾಗಿ ಸದೃಢವಾಗುವಂತೆ ಪ್ರೇರಣಾದಾಯಕ ಮಾತುಗಳನ್ನು ಆಡುತ್ತಾರೆ. ಸ್ಪಷ್ಟ ಮತ್ತು ಉದಾತ್ಯ ಗುರಿಯ ಕನಸನ್ನು ಬಿತ್ತುತ್ತಾರೆ. ಮಗು ಹಿಂದುಳಿಯಲು ಕಾರಣವನ್ನು ಕಂಡುಕೊಂಡು ಅಲ್ಲಿಯೇ ಪರಿಹಾರವನ್ನು ಸೂಚಿಸುತ್ತಾರೆ. ದೃಷ್ಟಾಂತಗಳೊಂದಿಗೆ ಹಾಸ್ಯಬೆರಿಸಿ ಮಾತನಾಡುವ ಅವರ ಶೈಲಿಗೆ ಮಕ್ಕಳು ಅಧಿಕಾರಿಯೆಂಬ ಭಾವವನ್ನು ಮರೆತು ಹಿರಿಯ ಸಹೋದರ ಎಂಬ ಭಾವದೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಯೋಜನೆ ಸಾಫಲ್ಯವನ್ನು ಪಡೆಯುತ್ತದೆ. ಇದೇ ಸಂದರ್ಭದಲ್ಲಿ ಪಾಲಕರ ಕಷ್ಟಸುಖಗಳನ್ನೂ ಆಲಿಸಿ, ವಿದ್ಯಾರ್ಥಿಯ ಪ್ರಗತಿಯಲ್ಲಿ ಕೈಗೊಳ್ಳಬೇಕಾದ ಜವಾಬ್ದಾರಿಯನ್ನೂ ತಿಳಿಸುತ್ತಾರೆ. ಇವರ ಈ ಕಾಳಜಿಗೆ ಪ್ರೀತಿಗೆ ಕರಗಿ ಎಷ್ಟೋ ಜನ ಪಾಲಕರು ಕಣ್ಣೀರು ಹಾಕಿದ್ದೂ ಉಂಟು. ಕೇವಲ ಆರ್ಥಿಕ ಕಾರಣದಿಂದ ಪ್ರತಿಭೆ ಕುಂದುವಂತಿದ್ದರೆ ಹಲವು ರೀತಿಯಿಂದ ಸಹಾಯ ಮಾಡಿದ್ದೂ ಉಂಟು. ಒಟ್ಟಿನಲ್ಲಿ ಒಂದು ಯೋಚನೆ ಹಲವು ಪರಿಣಾಮಗಳನ್ನು ಇದು ತಂದುಕೊಟ್ಟು ರಾಜ್ಯಮಟ್ಟದಲ್ಲಿ ಸಂಚಲನ ಮೂಡಿಸಿದೆ ಎಂದರೆ ತಪ್ಪಾಗಲಾರದು.
ಇಂದು ಸ್ಥಳೀಯ ಶಂಕರಲಿಂಗ ಪ್ರೌಢಶಾಲೆಯ ವಿದ್ಯಾರ್ಥಿನಿ ದರ್ಶನಾ ಹಾಲಭಾವಿ ಮನೆಗೆ ತೆರಳಿ ಮಾತನಾಡಿದರು. ಶಿಕ್ಷಕ ರಾಮಚಂದ್ರ ಕಾಕಡೆ ರಾಚಯ್ಯ ಹಿರೇಮಠ ಬಿಆರ್ಸಿ ಅಧಿಕಾರಿ ಎಮ್. ಬಿ. ಪಾಟೀಲ ಉಪಸ್ಥಿತರಿದ್ದರು.