ಕಾರವಾರ

ಗುಳ್ಳಾಪುರ ಸೇತುವೆ ಪರೀಶೀಲನೆ ; ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆ

ಗುಳ್ಳಾಪುರ ಸೇತುವೆ ಪರೀಶೀಲನೆ ; ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆ

ಕಾರವಾರ : ಗಂಗಾವಳಿ ಪ್ರವಾಹದಿಂದ ತಾಲ್ಲೂಕಿನ ಗುಳ್ಳಾಪುರ ಕಮ್ಮಾಣಿ ಪ್ರಮುಖ ಸೇತುವೆ ಕುಸಿದ ಸ್ಥಳಕ್ಕೆ  ವಿಕ್ಷಿಸಿದ ಶಾಸಕಿ ರೂಪಾಲಿ ಎಸ್‌.ನಾಯ್ಕ ಭೇಟಿ ನೀಡಿ ಸಮಸ್ಯೆ ಅವಲೋಕಿಸಿದರು.  

ಡೋಂಗ್ರಿ ಗ್ರಾಮ ಪಂಚಾಯ್ತಿಯ ಶೇವಕಾರ, ಹೆಗ್ಗಾರ, ಕಲ್ಲೇಶ್ವರ, ಹಳವಳ್ಳಿ, ಕಮ್ಮಾಣಿ, ಡೋಂಗ್ರಿ  ಗ್ರಾಮಗಳನ್ನು ಸಂಪರ್ಕಿಸುವ ಗುಳ್ಳಾಪುರ ಕಮ್ಮಾಣಿಯ ಪ್ರಮುಖ ಸೇತುವೆ ಕುಸಿದಿರುವುದನ್ನು ಪರೀಶೀಲಿಸಿದ ತರುವಾಯ ಮಾತನಾಡಿದ ಶಾಸಕರು, ಘಟ್ಟದ ಮೇಲೆ ಸುರಿದ ಭಾರಿ ಮಳೆಯಿಂದ ಗಂಗಾವಳಿ ನದಿಯು ಉಕ್ಕಿ ಹರಿದಿದೆ. ಈ ನದಿಯ ಪ್ರವಾಹದಿಂದ ಯಲ್ಲಾಪುರ ಮಾರ್ಗವಾಗಿ ಡೋಂಗ್ರಿಗೆ ಸಂಪರ್ಕ  ಸಾಧಿಸುವುದು ಕಷ್ಟವಾಗಿದೆ. ಅಚವೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮಳಲಗಾಂವ ಸೇತುವೆಯೂ ಸಹ ಭಾಗಶಃ ಹಾನಿಯಾಗಿದೆ. ಈ ಮಾರ್ಗದಿಂದಲೂ ಓಡಾಟ ಕಷ್ಟವಾಗಿದೆ. ಮಳಲಗಾಂವ ಮಾರ್ಗವಾಗಿ ಸಂಚರಿಸುವಾಗಲೂ ಜನತೆ ಎಚ್ಚರಿಕೆ ವಹಿಸಬೇಕು ಎಂದರು.  

ಡೊಂಗ್ರಿಯ ಆರು ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ದಿನ ನಿತ್ಯದ ಬಳಕೆಗೆ ಅವಶ್ಯಕವಾಗಿರುವ ವಸ್ತುಗಳ ಕೊರತೆಯಾಗದಂತೆ ತಾಲ್ಲೂಕಾಡಳಿತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಲು ಮುಂದಾಗಬೇಕು ಎಂದು ಜಿ.ಪಂ. ಸಿಇಒ ಪ್ರಿಯಾಂಗಾ ಎಂ. ಅವರಲ್ಲಿ ವಿನಂತಿಸಿದರು.  

ಗಂಗಾವಳಿ ನದಿ ನೀರಿನ ಪ್ರವಾಹ ಇಳಿದ ನಂತರ ದೋಣಿಗಳ ವ್ಯವಸ್ಥೆ ಮಾಡಬೇಕು. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಸಾಗಿಸಬಾರದು. ದೋಣಿಯಲ್ಲಿ ಸಂಚರಿಸುವಾಗ ಲೈಫ್ ಜಾಕೆಟ್ ವ್ಯವಸ್ಥೆ ಮಾಡಬೇಕು ಎಂದು ತಹಶೀಲ್ದಾರ್ ಹಾಗೂ ತಾ.ಪಂ. ಇಓಗೆ ಸೂಚಿಸಿದರು.  

ಕಾಳಜಿ ಕೇಂದ್ರದಲ್ಲಿ ಆಹಾರ ಸೇವನೆ: 

ಪ್ರವಾಹದಿಂದಾಗಿ ಸಂತ್ರಸ್ತರ ರಕ್ಷಣೆಗೆ ತಾಲ್ಲೂಕಿನ ಎಲ್ಲೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಂಕಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬುಳ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಸಂತ್ರಸ್ತರಿಗೆ ನೀಡುವ ಆಹಾರದ ಗುಣಮಟ್ಟವನ್ನು ಖುದ್ದಾಗಿ ಊಟವನ್ನು ಸೇವಿಸಿ ಪರೀಶೀಲಿಸಿದರು. ಊಟದ ಜೊತೆಗೆ ಉಪ್ಪಿನಕಾಯಿ, ಮೊಟ್ಟೆ, ಬಿಸಿ ನೀರು, ಮಕ್ಕಳಿಗೆ ಹಾಲಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  

ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಹಾಗೂ ಸದಸ್ಯರು ಗಮನ ಹರಿಸಬೇಕು. ಪ್ರವಾಹದಿಂದ ಮುಳುಗಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಮನೆ ಬಿದ್ದವರಿಗೆ ಮನೆ ಕಟ್ಟಿಕೊಳ್ಳಲು ಹಣವನ್ನು ಸರ್ಕಾರ ನೀಡುತ್ತದೆ. ನಿರಾಶ್ರಿತರು ಆತಂಕಗೊಳ್ಳಬೇಕಾಗಿಲ್ಲ ಎಂದು ಸಂತ್ರಸ್ತರಿಗೆ ಶಾಸಕಿ ರೂಪಾಲಿ ನಾಯ್ಕ ಅವರು ಧೈರ್ಯ ಹೇಳಿದರು. 

ಈ ಸಂದರ್ಭದಲ್ಲಿ  ತಹಶೀಲ್ದಾರ ಉದಯ ಕುಂಬಾರ, ತಾಲೂಕು ಪಂಚಾಯತ ಇಒ ಪಿ.ವೈ.ಸಾವಂತ, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು, ಪದಾಧಿಕಾರಿಗಳಾದ ರಾಘವೇಂದ್ರ ಭಟ್ಟ, ಚಂದ್ರಕಾಂತ ನಾಯ್ಕ, ಸ್ಥಳೀಯರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ