ಶೇಂಗಾ ಬೆಳೆ ಕ್ಷೇತ್ರೋತ್ಸವ, ತರಬೇತಿ ಕಾರ್ಯಕ್ರಮ
ಬ್ಯಾಡಗಿ 06: ಸುಧಾರಿತ ಬೇಸಾಯ ಕ್ರಮಗಳು ಹಾಗೂ ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ತಳಿಗಳ ಆಯ್ಕೆಯನ್ನು ರೈತರು ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿಯ ಜೊತೆಗೆ ಒಳ್ಳೆಯ ಲಾಭ ಪಡೆಯಬಹುದಾಗಿದೆ ಎಂದು ಉಪ ಕೃಷಿ ನಿರ್ದೇಶಕಿ ಜಿ.ಎಸ್.ಸ್ಫೂರ್ತಿ ಹೇಳಿದರು.
ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಗತಿಪರ ರೈತರಾದ ಚನ್ನಬಸಪ್ಪ ಬೂದಿಹಾಳ ಇವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರಾ ಭದ್ರತಾ ಯೋಜನೆಯಡಿ ರೈತರಿಗೆ ಆಯೋಜಿಸಿದ್ದ ಶೇಂಗಾ ಬೆಳೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿತ್ತನೆ ಪೂರ್ವ ಉಳುಮೆ ಕಾರ್ಯ ಮುಗಿದಲ್ಲಿ, ಮಣ್ಣಿನ ತೇವಾಂಶದ ಹದ ನೋಡಿಕೊಂಡು ಶೇಂಗಾ ಬಿತ್ತನೆ ಮಾಡಬಹುದಾಗಿದೆ. ಶೇಂಗಾ ಒಂದು ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆಯಾಗಿದ್ದು, ಎಲ್ಲಾ ರೀತಿಯ ಹವಾಮಾನಕ್ಕೂ ಹೊಂದಿಕೊಳ್ಳುವ ಗುಣ ಹೊಂದಿದ್ದು, ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯಬಹುದಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲು ಉದ್ದೇಶಿಸಲಾಗಿದ್ದು, ರೈತರು ಭೂಮಿಯನ್ನು ಚೆನ್ನಾಗಿ ಹದ ಮಾಡಿದ ನಂತರ ಶಿಫಾರಸ್ಸು ಮಾಡಿದ 4 ಟನ್ ಸಾವಯವ ಗೊಬ್ಬರವನ್ನು ಬಿತ್ತನೆಗೆ 2-3 ವಾರ ಮೊದಲು ಬಿತ್ತನೆ ಸಮಯದಲ್ಲಿ ಬಳಸಬೇಕು ಹಾಗೂ ರಾಸಾಯನಿಕ ಗೊಬ್ಬರಗಳಾದ 10 ಕಿ.ಗ್ರಾಂ ಸಾರಜನಕ 20 ಕಿ.ಗ್ರಾಂ ರಂಜಕ 10 ಕಿ.ಗ್ರಾಂ ಪೆÇಟ್ಯಾಷ್ನ್ನು ಬಿತ್ತನೆ ಸಮಯದಲ್ಲಿ ಹಾಕುವುದು. ಎಕರೆಗೆ 4 ಕಿ.ಗ್ರಾಂ ಸತುವಿನ ಸಲ್ಫೇಟ್ ಹಾಗೂ 4 ಕಿ.ಗ್ರಾಂ ಬೋರಾಕ್ಸನ್ನು ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬಿತ್ತುವ ಸಂದರ್ಭದಲ್ಲಿ ಎರಚಬೇಕು. ಎಣ್ಣೆಕಾಳು ಬೆಳೆಯಾದ ಶೇಂಗಾಗೆ ಕ್ಯಾಲ್ಸಿಯಂ ಮತ್ತು ಗಂಧಕದ ಅವಶ್ಯಕತೆ ಅಗತ್ಯವಾಗಿದ್ದು, ರೈತರು ಇತರೆ ಗೊಬ್ಬರಗಳ ಜೊತೆಗೆ ಜಿಪ್ಸಂನ್ನು ಬೆಳೆಗೆ ಪೂರೈಸುವುದು ಅವಶ್ಯವಾಗಿದೆ. ಇದರಿಂದ ಕಾಯಿ ಗಟ್ಟಿಯಾಗುವಿಕೆ, ಎಣ್ಣೆ ಅಂಶ ಜಾಸ್ತಿಯಾಗಿ ಇಳುವರಿ ಹೆಚ್ಚಾಗುವುದು. ಬಿತ್ತನೆ ಸಮಯದಲ್ಲಿ ಎಕರೆಗೆ 2 ಕ್ವಿಂಟಾಲ್ ಜಿಪ್ಸಂ ಅನ್ನು ಸಾಲಿನ ಮಧ್ಯೆ ಹಾಕುವುದು. ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಬಳಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶಿವಮೂರ್ತಿ ಮಾತನಾಡಿ, ಶೇಂಗಾ ಬೆಳೆಯಲ್ಲಿ ಹೊಸ ತಳಿಗಳು, ಹೊಸ ತಾಂತ್ರಿಕತೆಗಳ ಮಾಹಿತಿ ನೀಡಿ, ರೋಗ ಹಾಗೂ ಕೀಟಗಳ ಹತೋಟಿ ಕ್ರಮಗಳ ಬಗ್ಗೆ ವಿವರಿಸುತ್ತಾ ಬೆಳೆ ಪರಿವರ್ತನೆ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ಕೃಷಿ ಅಧಿಕಾರಿಗಳಾದ ಆರ್.ಮಂಜುನಾಥ, ನಾಗರಾಜ ಬನ್ನಿಹಟ್ಟಿ, ಸಹಾಯಕ ಕೃಷಿ ಅಧಿಕಾರಿ ಎಸ್.ಪಿ.ಮರಬಸಣ್ಣನವರ, ಆತ್ಮಾ ಸಿಬ್ಬಂದಿಗಳಾದ ಎಸ್.ಕೆ.ಚಂದ್ರಶೇಖರ, ಸುರೇಶ ನಾಯಕ, ತಾಂತ್ರಿಕ ಉತ್ತೇಜಕರಾದ ಅಣ್ಣಪ್ಪ, ಪ್ರಭು ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.