ಹಳೆ ಶೀಡೇನೂರು ಕೆರೆ ಅಭಿವೃದ್ಧಿಗೆ ಭೂಮಿಪೂಜೆ: ನೀರಿನ ಸಂರಕ್ಷಣೆಗೆ ಆದ್ಯತೆ
ಬ್ಯಾಡಗಿ, ಜು. 5: ಹೊಸ ಕೆರೆಗಳನ್ನು ನಿರ್ಮಿಸುವುದಕ್ಕಿಂತ ಈಗಿರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಹಳೆ ಶೀಡೇನೂರು ಗ್ರಾಮದ ಕೆರೆಯ 3 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುವುದರ ಜೊತೆಗೆ ಕೃಷಿಗೆ ನಿರಂತರ ನೀರು ಲಭ್ಯವಾಗಲಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದರೊಂದಿಗೆ ಜಾನುವಾರುಗಳಿಗೂ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ನೇಹರೂ ಓಲೇಕಾರ ಮಾತನಾಡಿ, ಈ ಭಾಗದ ರೈತರು ಕೃಷಿಯನ್ನೇ ಅವಲಂಬಿಸಿರುವುದರಿಂದ ಕೆರೆಗಳ ಅಭಿವೃದ್ಧಿಯಿಂದ ಕೃಷಿ, ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪೂರ್ವಜರು ನಿರ್ಮಿಸಿದ ಕೆರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಮಂಜುನಾಥ ಓಲೇಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ರಮೇಶ್ ಸುತ್ತಕೋಟಿ, ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ, ಚನ್ನಬಸಪ್ಪ ಹುಲ್ಲತ್ತಿ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.