ಧಾರವಾಡ - ಹುಬ್ಬಳ್ಳಿ

ಅನುದಾನ ಬಿಡುಗಡೆ; ರೈತರ ಖಾತೆಗೆ ಡಿಬಿಟಿ ಮೂಲಕ ಇಂದೇ ಜಮೆ

ಅನುದಾನ ಬಿಡುಗಡೆ; ರೈತರ ಖಾತೆಗೆ ಡಿಬಿಟಿ ಮೂಲಕ ಇಂದೇ ಜಮೆ

ಧಾರವಾಡ ನ.27: ಆಗಸ್ಟ್‌-2025 ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.27) ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಧಾರವಾಡ ಜಿಲ್ಲೆಗೆ 63.77 ಕೋಟಿ ಹೆಚ್ಚುವರಿಯಾಗಿ ಅನುದಾನವನ್ನು ಪ್ರತಿ ಹೆಕ್ಟರ್‌ಗೆ ರೂ. 8,500 ಗಳನ್ನು ವಿತರಿಸಲು ಕ್ರಮವಹಿಸಿ, ರೈತರ ಖಾತೆಗಳಿಗೆ ಇನ್‌ಪುಟ್ ಸಿಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಸರ್ಕಾರದ ಆದೇಶದಂತೆ, 2025-26ನೇ ಸಾಲಿನ ಆಗಸ್ಟ್‌-2025 ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು, ವಿಶೇಷ ಪ್ಯಾಕೇಜ್ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟರ್‌ಗೆ ರೂ. 8,500 ಗಳನ್ನು ವಿತರಿಸಲು ಇಂದು ಕ್ರಮವಹಿಸಿದ್ದಾರೆ. ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಇಂದು ಧಾರವಾಡ ಜಿಲ್ಲೆಗೆ 63.77 ಕೋಟಿ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.  

ಪರಿಹಾರ ವಿತರಿಸಿದ ವಿವರ: ಅಣ್ಣಿಗೇರಿ ತಾಲೂಕಿನಲ್ಲಿ 12,127 ರೈತ ಫಲಾನುಭವಿಗಳ ಒಟ್ಟು 14,036.56 ಹೆಕ್ಟರ್ ಕ್ಷೇತ್ರಗಳಿಗೆ ರೂ. 11,93,36,790 ಪರಿಹಾರ ವಿತರಣೆ ಮಾಡಲಾಗಿದೆ.  

ಧಾರವಾಡ ತಾಲೂಕಿನಲ್ಲಿ 12,643 ರೈತ ಫಲಾನುಭವಿಗಳ ಒಟ್ಟು 13,414.47 ಹೆಕ್ಟರ್ ಕ್ಷೇತ್ರಗಳಿಗೆ ರೂ. 11,40,91,341 ಪರಿಹಾರ ವಿತರಣೆ ಮಾಡಲಾಗಿದೆ.  

ಹುಬ್ಬಳ್ಳಿ ತಾಲೂಕಿನಲ್ಲಿ 11,122 ರೈತ ಫಲಾನುಭವಿಗಳ ಒಟ್ಟು 13,945.77 ಹೆಕ್ಟರ್ ಕ್ಷೇತ್ರಗಳಿಗೆ ರೂ. 11,85,64,826 ಪರಿಹಾರ ವಿತರಣೆ ಮಾಡಲಾಗಿದೆ.  

ಹುಬ್ಬಳ್ಳಿ ನಗರ ತಾಲೂಕಿನಲ್ಲಿ 851 ರೈತ ಫಲಾನುಭವಿಗಳ ಒಟ್ಟು 775.04 ಹೆಕ್ಟರ್ ಕ್ಷೇತ್ರಗಳಿಗೆ 66,01,919 ಪರಿಹಾರ ವಿತರಣೆ ಮಾಡಲಾಗಿದೆ.  

ಕುಂದಗೋಳ ತಾಲೂಕಿನಲ್ಲಿ 11,208 ರೈತ ಫಲಾನುಭವಿಗಳ ಒಟ್ಟು 11,538.14 ಹೆಕ್ಟರ್ ಕ್ಷೇತ್ರಗಳಿಗೆ ರೂ. 9,81,79,837 ಪರಿಹಾರ ವಿತರಣೆ ಮಾಡಲಾಗಿದೆ.  

ನವಲಗುಂದ ತಾಲೂಕಿನಲ್ಲಿ 18,883 ರೈತ ಫಲಾನುಭವಿಗಳ ಒಟ್ಟು 21,279.59 ಹೆಕ್ಟರ್ ಕ್ಷೇತ್ರಗಳಿಗೆ ರೂ. 18,09,71,366 ಪರಿಹಾರ ವಿತರಣೆ ಮಾಡಲಾಗಿದೆ.  ಧಾರವಾಡ ಜಿಲ್ಲೆಯಲ್ಲಿ ಒಟ್ಟು 66,834 ಅರ್ಹ ರೈತರ ಒಟ್ಟು 74,989.57 ಹೆಕ್ಟರ್ ಕ್ಷೇತ್ರಗಳಿಗೆ ರೂ. 63.77 ಕೋಟಿ ಹೆಚ್ಚುವರಿ ಇನಪುಟ್ ಸಬ್ಸಿಡಿಯನ್ನು ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತವಾಗಿ ಡಿಬಿಟಿ ಮುಖಾಂತರ ನೇರವಾಗಿ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.  

ಈಗಾಗಲೇ ಜಿಲ್ಲೆಯ ಬೆಳೆಹಾನಿಯಾದ ರೈತರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಒಟ್ಟು 66,834 ರೈತರ, 74,989.57 ಹೆಕ್ಟರ್ ಕ್ಷೇತ್ರಗಳಿಗೆ ರೂ. 64.96 ಕೋಟಿ ಇನಪುಟ್ ಸಬ್ಸಿಡಿಯನ್ನು ಈ ಹಿಂದೆಯೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಿದ್ದು ಇರುತ್ತದೆ. ಮತ್ತು ಇಂದು ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ ರೈತ ಫಲಾನುಭವಿಗಳಿಗೆ ಬಿಡುಗಡೆ ಮಾಡಿರುವ ಪರಿಹಾರ ಮೊತ್ತವನ್ನು ಸಹ ರೈತರ ಬ್ಯಾಂಕ್ ಖಾತೆಗಳಿಗೆ ಇಂದೇ ಜಮೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ