ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರಕಾರ ನಿರ್ಲಕ್ಷ್ಯ: ಖಂಡನೆ
ಮುಂಡಗೋಡ: ತಾಲೂಕಾದ್ಯಂತ ಭೂಮಿ ಸಾಗುವಳಿದಾರರ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರಕಾರ ನಿರ್ಲಕ್ಷ್ಯ ಭಾವನೆ ತೊರಿಸಿರುವುದು ಖಂಡನಾರ್ಹ. ರೈತರ ಭೂಮಿ ಹಕ್ಕು ಮತ್ತು ಸಮಸ್ಯೆಗಳಿಗೆ ಸ್ಫಂದಿಸಲು ಮುಂಡಗೋಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಂಡಗೋಡ ತಾಲೂಕಾ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಚರ್ಚೆಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ತಾಲೂಕಾದ್ಯಂತ ಅರಣ್ಯ ಭೂಮಿ ಮಂಜೂರಿ ಪ್ರಕ್ರೀಯೆ ಸ್ಥಗಿತಗೊಂಡಿರುವುದು, ಕಂದಾಯ ಮತ್ತು ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಭಾವನೆ, ಬೆಳೆನ ಷ್ಟಕ್ಕೆ ಇಲ್ಲದ ಪರಿಹಾರ, ಅತೀವೃಷ್ಟಿಯಿಂದ ಉಂಟಾದ ನಷ್ಟ, ವಿಮೆ ಪರಿಹಾರದಲ್ಲಿ ತಾಂತ್ರಿಕ ದೋಷ, ಜಿಪಿಎಸ್ ಆಗದೇ ಇರುವುದು ಮುಂತಾದ ಸಮಸ್ಯೆಗಳ ಕುರಿತು ತಾಲೂಕಾದ್ಯಂತ ಆಗಮಿಸಿದ ಭೂಮಿ ಹಕ್ಕು ಹೋರಾಟಗಾರರು ಸರಕಾರದ ರೈತ ವಿರೋಧಿ ನೀತಿ ಕುರಿತು ಚರ್ಚೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಭೂಮಿ ಹಕ್ಕು ಹೋರಾಟಗಾರ ಶಿವಾನಂದ ಜೋಗಿ, ಶೇಖಯ್ಯ ಹಿರೇಮಠ, ಲಕ್ಷ್ಮಣ ವಾಲ್ಮೀಕಿ, ನನ್ನೆಸಾಬ ಚಪಾತಿ, ರಾಮು ಗೌಳಿ, ನಾಗರಾಜ ಮಾಡಳ್ಳಿ, ವಿರಭದ್ರ್ಪ ಗಳಗಿ, ಚಿಕ್ಕಪ್ಪ ಸಾಬಣ್ಣ, ಪರಸಪ್ಪ ಮುಕ್ಕಲ್ ಮುಂತಾದ ನೂರಾರು ಹೋರಾಟಗಾರ ಪ್ರಮುಖರು ಭಾಗವಹಿಸಿದ್ದರು.
ಅರಣ್ಯ ಹಕ್ಕು ಅರ್ಜಿ ಶೇ 48 ಬಾಕಿ: ತಾಲೂಕಾದ್ಯಂತ ಅರಣ್ಯ ಹಕ್ಕು ಕಾಯಿದೆಯಲ್ಲಿ ವಿವಿಧ ಹಕ್ಕಿಗೆ ಸಂಬಂಧಿಸಿ 6210 ಅರ್ಜಿಗಳು ಸ್ವೀಕಾರ ಆಗಿದ್ದು, ವಿವಿಧ ಕಾರಣಗಳಿಂದ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಮಾಹಿತಿ ಕೊರತೆಯಿಂದ 2980 ಶೇ. 48 ರಷ್ಟು ಅರ್ಜಿಗಳು ವಿಚಾರಣೆ ಮಾಡಬೇಕಾಗಿದ್ದು, ಕೇವಲ 21 ಅರ್ಜಿಗಳಿಗೆ ಮಾತ್ರ ಮಾನ್ಯತೆ ಸಿಕ್ಕಿದೆ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ: ವನ್ಯಪ್ರಾಣಿಗಳಿಂದ ಬೆಳೆ ನಷ್ಟವಾಗಿರುವ ಕುರಿತು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಕುರಿತು ಚರ್ಚೆಯಲ್ಲಿ ತೀವ್ರ ಅಸಮಾದಾನ ವ್ಯಕ್ತವಾಯಿತಲ್ಲದೇ ಆಕ್ರೋಶಭರಿತವಾಗಿ ಹೋರಾಟಗಾರರು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.