ಕಾರವಾರ

ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಪ್ರೋತ್ಸಾಹಧನ 2.6 ಕೋಟಿ

ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಪ್ರೋತ್ಸಾಹಧನ 2.6 ಕೋಟಿ

ಅಸ್ಪೃಶ್ಯತೆ ನಿವಾರಣೆಗೆ ಸರ್ಕಾರದ ದಿಟ್ಟ ಹೆಜ್ಜೆ : ಮನುಷ್ಯರೆಲ್ಲಾ ಒಂದೇ ಎಂದು ಸಾರಿದ ಯುವ ಜೋಡಿಗಳು : 

ಜಾತಿಯ ಬಂಧನ ಚೌಕಟ್ಟು ಮುರಿದು ಸಮಾಜಕ್ಕೆ ಆದರ್ಶರಾದರು  


* ಜಿಲ್ಲೆಯಲ್ಲಿ 157 ಜೋಡಿ ಅಂತರ್ಜಾತಿ ವಿವಾಹಿತರು ; ಮುಂಡಗೋಡ -ಶಿರಸಿಯಲ್ಲಿ ಹೆಚ್ಚು ಅಂತರ್ಜಾತಿ ವಿವಾಹಗಳು 

ಕಾರವಾರ: ಜಾತಿ ವ್ಯವಸ್ಥೆ ತೊಡೆದು ಹಾಕಲು ಹಾಗೂ ಅಂತರ್ಜಾತಿ ವಿವಾಹವೇ ಮದ್ದು ಎಂದು ತಿಳಿದಿರುವ ಸರ್ಕಾರ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅಂತರ್ಜಾತಿ ವಿವಾಹಗಳನ್ನು ಕಾನೂನು ಬದ್ಧವಾಗಿಯೇ ಬೆಂಬಲಿಸುತ್ತಾ ಬಂದಿದೆ. ಅಸ್ಪೃಶ್ಯತೆ ನಿವಾರಣೆಗೆ ಸಮಾಜ ಕಲ್ಯಾಣ ಇಲಾಖೆ ಶ್ರಮಿಸುತ್ತಲೇ ಬಂದಿದ್ದು, ಸಿದ್ಧರಾಮಯ್ಯ ಅವರ ಸರ್ಕಾರ ಇದ್ದಾಗ ಅಂತರ್ಜಾತಿ ವಿವಾಹಿತರು 5 ಲಕ್ಷದವರೆಗೆ ಆದಾಯ ಹೊಂದಿದ್ದರು , ಪ್ರೋತ್ಸಾಹಧನ ಪಡೆಯಲು ಅರ್ಹರು ಎಂದು ಕೆಲ ತಿದ್ದುಪಡಿಗಳನ್ನು ಮಾಡಲಾಯಿತು. ಮೊದಲ ಕಂತಾಗಿ 50 ಸಾವಿರ ನಗದು ನೀಡಿದರೆ, ಎರಡನೇ ಕಂತಿನ ಹಣವನ್ನು ಶಾಶ್ವತ ಠೇವಣಿಯಾಗಿ ಇಡುವ ಪದ್ಧತಿ ಈಗ ಅನುಷ್ಠಾನದಲ್ಲಿದೆ. ಅಲ್ಲದೇ ಮೂರನೇ ಕಂತನ್ನು ವಿವಾಹಿತರಿಗೆ ನೀಡುವ ಪದ್ಧತಿ ನಮ್ಮಲ್ಲಿದೆ. ಪರಿಶಿಷ್ಟ ಜಾತಿಯ ಹೆಣ್ಣುಮಗಳು ಪರಿಶಿಷ್ಟ ವರ್ಗ ಅಥವಾ ಮೇಲ್ಜಾತಿಯಲ್ಲಿ ವಿವಾಹವಾದರೆ 3 ಲಕ್ಷ ರೂ ಪ್ರೋತ್ಸಾಹಧನ ಸೌಲಭ್ಯವಿದ್ದರೆ, ಪರಿಶಿಷ್ಟ ಜಾತಿಯ ಹುಡುಗ ಮೇಲ್ಜಾತಿಯ ಯುವತಿಯನ್ನು ಮದುವೆಯಾದರೆ 2.50 ಲಕ್ಷ ಪ್ರೋತ್ಸಾಹಧನವಿದೆ. ಅಲ್ಲದೇ ಅಂತರ್ಜಾತಿ ವಿವಾಹಗಳಿಗೂ ಆರ್ಥಿಕ ಪ್ರೋತ್ಸಾಹದ ಯೋಜನೆಗಳಿವೆ. ಆಯಾ ಸಮುದಾಯಗಳಲ್ಲಿ ಸರಳ ಮತ್ತು ಸಾಮೂಹಿಕ ವಿವಾಹವಾದರೆ 50 ಸಾವಿರದ ವರೆಗೆ ಪ್ರೋತ್ಸಾಹಧನವಿದೆ.  

ಅಂತರ್ ಧರ್ಮೀಯ ವಿವಾಹಗಳಿಗೆ ಸಾಹಯವಿಲ್ಲ ; 

ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪಶ್ಯತೆ ಇರುವ ಕಾರಣ ಅಂತರ್ಜಾತಿ ಮದುವೆಗಳಿಗೆ ಸರ್ಕಾರದ ಪ್ರೋತ್ಸಾಹಧನವಿದೆ. ಅದೇ ಒಂದು ಧರ್ಮದ ಯುವಕರು, ಜೈನ, ಸಿಖ್, ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಯುವತಿಯರನ್ನು ಅಥವಾ ಅನ್ಯ ಧರ್ಮದ ಯುವತಿಯರು ಹಿಂದು ಧರ್ಮದ ಯುವಕರನ್ನು ಮದುವೆಯಾದರೆ ಸರ್ಕಾರದ ಪ್ರೋತ್ಸಾಹದ ಧನ ಸಿಗುವುದಿಲ್ಲ.ಕಾರಣ ಹಿಂದೂ ಧರ್ಮ ಹೊರತು ಪಡಿಸಿ ಇತರೆ ಧರ್ಮಗಳಲ್ಲಿ ಅಸ್ಪೃಶ್ಯತೆ ಇಲ್ಲ ಎಂಬ ಕಾರಣವನ್ನು ಸರ್ಕಾರ ತನ್ನ ಮುಂದೆ ಇಟ್ಟುಕೊಂಡಿದೆ.  

ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಕಾರಣ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ, ಮನುಷ್ಯರಲ್ಲಿ, ಯುವ ಜನಾಂಗದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸುವುದೇ ಆಗಿದೆ. ಅಲ್ಲದೆ ಸಮಾನತೆಯನ್ನು ತರುವುದು ಸಹ ಅಂತರ್ ಜಾತಿ ವಿವಾಹಗಳಿಗೆ ಪ್ರೋತ್ಸಾಹದ ಪ್ರಮುಖ ಉದ್ದೇಶವಾಗಿದೆ.  

ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ನಡೆದ ಇಂಟರ್ ಕಾಸ್ಟ ಮ್ಯಾರೇಜಸ್ : 

ಜಿಲ್ಲೆಯಲ್ಲಿ ಇಂಟರ್ ಕಾಸ್ಟ ಮ್ಯಾರೇಜಸ್ ನಡೆಯುತ್ತಲೇ ಇವೆ. 2019 -20 ನೇ ಸಾಲಿನಲ್ಲಿ 68 ಜನ ಯುಕವರು , ತಮ್ಮ ಜಾತಿಯನ್ನು ಮೀರಿ ಮೇಲ್ಜಾತಿಯ ಅಥವಾ ಶೂದ್ರ ಸಮುದಾಯದ, ಅಥವಾ ತಮ್ಮದೇ ಸಮುದಾಯದ ಇತರೆ ಪಂಗಡಗಳ ಯುವತಿಯರನ್ನು ಮದುವೆಯಾಗಿ ಆದರ್ಶ ಮೆರೆದಿದ್ದಾರೆ. ಪರಿಶಿಷ್ಟ ವರ್ಗದ ಯುವಕ ,ಬ್ರಾಹ್ಮಣ, ದೈವಜ್ಞ ಬ್ರಾಹ್ಮಣ  ಇಲ್ಲವೇ  ನಾಯ್ಕ, ಮಡಿವಾಳ ಇಲ್ಲವೇ  ಬೋವಿ, ವಾಲ್ಮೀಕಿ, ವಡ್ಡರ ಸಮುದಾಯದ ಯುವತಿಯನ್ನು ಮದುವೆಯಾದ ಉದಾಹರಣೆಗಳು ಇವೆ. ಇನ್ನು ಪರಿಶಿಷ್ಟ ಜಾತಿಯ ಯುವತಿಯರು ಮೇಲ್ಜಾತಿಯ ಯುವಕರನ್ನು, ಶೂದ್ರ ಸಮುದಾಯದಲ್ಲಿ ಇಲ್ಲದೇ ಪರಿಶಿಷ್ಟ ಪಂಗಡದಲ್ಲಿ ವಿವಾಹವಾದ ಘಟನೆಗಳಿವೆ. ಮೇಲ್ಜಾತಿಯ ಯುವತಿಯರು ದಲಿತ ಸಮುದಾಯದ ಯುವಕರನ್ನು ವರಿಸಿದ ಉದಾಹರಣೆಗಳು ಇವೆ. ಒಂದು ರೀತಿಯ ಸಣ್ಣ ಪ್ರಮಾಣದ ಚಲನೆ ಜಿಲ್ಲೆಯಲ್ಲಿ ಕಂಡು ಬಂದಿದೆ. 2019 -20 ನೇ ಸಾಲಿನಲ್ಲಿ 89 ಯುವತಿಯರು ಅಂತರ್ಜಾತಿ ವಿವಾಹವಾಗಿದ್ದಾರೆ. ಒಟ್ಟು 157 ಕುಟುಂಬಗಳು ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ 2.60 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದೆ. 

2020-21ರಲ್ಲಿ 22 ಜೋಡಿಗಳು ಅಂತರ್ಜಾತಿ ವಿವಾಹವಾಗಿವೆ : 

ಉತ್ತರ ಕನ್ನಡ ಜಿಲ್ಲೆಯಲ್ಲಿ 2020-21ರಲ್ಲಿ 22 ಜೋಡಿಗಳು ಅಂತರ್ಜಾತಿ ವಿವಾಹವಾಗಿವೆ. 11 ಜನ ಯುವಕರು ಜಾತಿ ಬಂಧನ ಮುರಿದು ಅಂತರ್ಜಾತಿ ಯುವತಿಯರ ಕೈ ಹಿಡಿದಿದ್ದಾರೆ. ಹಾಗೇ 11 ಜನ ಯುವತಿಯರು ಸಹ ತಮ್ಮ ಜಾತಿ ಚೌಕಟ್ಟು ಮುರಿದು ಅನ್ಯ ಜಾತಿಯ ಯುವಕರನ್ನು ಮದುವೆಯಾಗಿ ಮನುಷ್ಯರು ಒಂದೇ ಎಂಬ ಸಂದೇಶ ಸಾರಿದ್ದಾರೆ. ಅಲ್ಲದೆ 49 ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಅಂತರ್ಜಾತಿ ವಿವಾಹ ಆಗಿದ್ದು, ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಜೋಡಿಗಳ ದಾಖಲೆ ಹಾಗೂ ಸ್ಥಳ ಪರೀಶೀಲನೆ ಇದೀಗ ನಡೆದಿದೆ. ಪ್ರಸಕ್ತ ಸಾಲಿನಲ್ಲಿ 22 ಅಂತರ್ಜಾತಿ ವಿವಾಹಿತರಿಗೆ 57 ಲಕ್ಷ ರೂ. ಪ್ರೊತ್ಸಾಹಧನ ತಲುಪಿದ್ದು, ಉಳಿದ ಪ್ರೊತ್ಸಾಹ ಧನ ಇನ್ನಾರು ತಿಂಗಳಲ್ಲಿ ತಲುಪಲಿದೆ.  

ಶಿರಸಿ-ಮುಂಡಗೊಡ ಭಾಗದಲ್ಲಿ ಜಾತಿ ಮೀರುವಿಕೆ ಹೆಚ್ಚು: 

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚು ನಡೆದಿವೆ ಎಂದು ದಾಖಲೆಗಳು ಹೇಳುತ್ತಿವೆ. 2019-20ನೇ ಸಾಲಿನಲ್ಲಿ ಮುಂಡಗೋಡ ತಾಲೂಕಿನಲ್ಲಿನ 30 ಜೋಡಿ ಅಂತರ್ಜಾತಿ ವಿವಾಹವಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ 25 ಮದುವೆಗಳು ಅಂತರ್ಜಾತಿಯ ವೇದಿಕೆ ಹತ್ತಿವೆ. ಅಂಕೋಲಾ, ಹಳಿಯಾಳದಲ್ಲಿ ತಲಾ 15 ಜೋಡಿ, ಹೊನ್ನಾವರದಲ್ಲಿ 23 ಜೋಡಿ, ಭಟ್ಕಳದಲ್ಲಿ 11 , ಕುಮಟಾ,  ಸಿದ್ದಾಪುರ, ಕಾರವಾರದಲ್ಲಿ ತಲಾ 9 , ಯಲ್ಲಾಪುರದಲ್ಲಿ 10 ಜೊಡಿ ಅಂತರ್ಜಾತಿ ವಿವಾಹವಾಗಿ ಅಂಬೇಡ್ಕರ್ ಹಾದಿಯಲ್ಲಿ ನಡೆದಿದ್ದಾರೆ. ಜೊಯಿಡಾದಲ್ಲಿ 1 ಜೋಡಿ ಮಾತ್ರ ಅಂತರ್ಜಾತಿ ವಿವಾಹದ ಬೆಳಕು ಕಂಡಿದೆ.  

ಅಂತರ್ಜಾತಿ ವಿವಾಹಗಳಿಗೆ ಸರ್ಕಾರದ ಪ್ರೊತ್ಸಾಹಧನವಿದೆ. ಅಂತರ್ಜಾತಿ ವಿವಾಹಿತರಿಗೆ ಸರ್ಕಾರದ ಅನೇಕ ಸೌಲಭ್ಯಗಳಿವೆ. ಅಲ್ಲದೇ ಮದುವೆಯಾಗಿ 18 ತಿಂಗಳ ನಂತರ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಅವರ ದಾಖಲೆಗಳ ಪರೀಶೀಲನೆ ನಂತರ ಅವರ ಆಕೌಂಟ್‌ಗೆ ಪ್ರೋತ್ಸಾಹಧನ ಜಮೆಯಾಗುತ್ತದೆ. ಅಸ್ಪೃಶ್ಯತೆ ನಿವಾರಣೆಯೇ ಅಂತರ್ಜಾತಿ ವಿವಾಹದ ಮುಖ್ಯ ಉದ್ದೇಶ. ಈ ಕಾರಣದಿಂದ ಸರ್ಕಾರ ಯೋಜನೆ ರೂಪಿಸಿದೆ. ಯುವ ಜನಾಂಗ ಉತ್ತಮ ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಣದ ಫಲದಿಂದ ಸಂಗಾತಿ ಆಯ್ಕೆಯಲ್ಲಿ ಜಾತಿ ಮೀರಿದರೆ ಅದೊಂದು ಆದರ್ಶದ ನಡೆ.  

- ಪುರುಷೋತ್ತಮ . ಜಿಲ್ಲಾ ಅಧಿಕಾರಿ. 

ಸಮಾಜಕಲ್ಯಾಣ ಇಲಾಖೆ. ಕಾರವಾರ. 


ಸುದ್ದಿ ಓದಿ