ರೈತರ ಸಮಸ್ಯೆಗಳಿಗೆ ಮುಕ್ತಿ ನೀಡಲು ಸರಕಾರದ ಕ್ರಮ: .ಪಾಟೀಲ
ತಾಳಿಕೋಟೆ13: ಕಂದಾಯ ಇಲಾಖೆಯ ದಾಖಲೆಗಳಿಗಾಗಿ ರೈತರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ರಾಜ್ಯ ಸರ್ಕಾರವೇ ರೈತರ ಮನೆಗಳಿಗೆ ಹೋಗಿ ದಾಖಲೆಗಳನ್ನು ನೀಡಿ ಕಂದಾಯ ದಾಖಲೆ ಮನೆ ಬಾಗಿಲಿಗೆ ತಲುಪಿಸುವ ಐತಿಹಾಸಿಕ ನಿರ್ಧಾರವನ್ನು ಮಾಡಿದೆ ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ದಾಖಲೆಗಾಗಿ ಅಲೆದಾಟ ನಡೆಸಬೇಕಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ನೆಲಸಿರುವ ರೈತಾಪಿ ಕುಟುಂಬಗಳಿಗೆ ದಾಖಲೆಗಳನ್ನು ಉಚಿತವಾಗಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡುವ ದೂರಗಾಮಿ ಯೋಜನೆಯಾಗಿದೆ. ಸದರಿ ದಾಖಲೆಗಳನ್ನು ಕ್ಷೇತ್ರದ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಗ್ರಾಮ ಸಹಾಯಕರು, ರಾಜಸ್ವ ನೀರೀಕ್ಷಕರು, ತಹಸೀಲ್ದಾರ್ ಮನೆಗಳಿಗೆ ತಲುಪಿಸಿ, ದಾಖಲೆ ನೀಡಿದ ರೈತ ಕುಟುಂಬಗಳಿಂದ ಸ್ವೀಕೃತಿ ಸಹಿಯನ್ನು ಪಡೆಯುತ್ತಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಲ್ಲ ದಾಖಲಾತಿಗಳನ್ನು ಡಿಜಿಟಲಿಕರಣ ಮಾಡಲಾಗುತ್ತಿದೆ. ಇದರಿಂದ ಅಲೆದಾಟ ತಪ್ಪಿಸಿ ಮನೆ ಬಾಗಿಲಿಗೆ ದಾಖಲೆಗಳನ್ನು ನೀಡಲಾಗುವದು. ಅಧಿಕಾರಿಗಳ ನಡೆಗೆ ಹಳ್ಳಿ ಕಡೆಗೆ ಹೋಗಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳದಲ್ಲಿಯೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಸ್ಥಳದಲ್ಲಿಯೇ ಪರಿಹಾರ ಸಿಗದಿದ್ದಾಗ 7 ದಿನದೊಳಗೆ ಪರಿಹಾರ ನೀಡಬೇಕು ಎನ್ನುವ ಆದೇಶ ಮಾಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಆಗಲಿದೆ. ರಾಜ್ಯದ ಬಿಜೆಪಿ ಸರಕಾರ ರೈತರ ಅಲೆದಾಟ ತಪ್ಪಿಸಲು ಹಲವು ಕ್ರಮ ಕೈಕೊಂಡಿದ್ದು ನಮ್ಮ ಸರಕಾರ ರೈತರ ಪರವಾಗಿದೆ ಎಂದರು.
ತಹಶೀಲ್ದಾರ ಅನಿಲಕುಮಾರ ಢವಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ಬಿರಾದಾರ, ಕೃಷಿ ಅಧಿಕಾರಿ ಮಹೇಶ ಜೋಶಿ, ಶಿರಸ್ತೆದಾರ ಜಿ.ಆರ್.ಜೈನಾಪೂರ, ಪಿಡಿಓ ಬಿ.ಎಮ್.ಸಾಗರ, ಗ್ರಾಮ ಲೆಕ್ಕಾಧಿಕಾರಿ ಜಯರಾಮ ಚವ್ಹಾಣ, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ಸಹ ಕಂದಾಯ ಇಲಾಖೆ ದಾಖಲೆ ಮನೆ ಬಾಗಿಲಿಗೆ ಎನ್ನುವ ಘೋಷವಾಕ್ಯದಡಿ ಕಂದಯ ಇಲಾಖೆ ದಾಖಲೆಗಳನ್ನು ನೀಡಲಾಯಿತು. ಕಂದಾಯ, ಗ್ರಾಮ ಪಂಚಯತ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ದಾಖಲೆಗಳನ್ನು ನೀಡಿದರು.
ಪೋಟೋ,
ಟಿಎಲ್ಕೆ-12-1 ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ದಾಖಲೆಗಳನ್ನು ರೈತರಿಗೆ ನೀಡುವ ಮೂಲಕ ಚಾಲನೆ ನೀಡಿದರು.