ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ: ಉಸ್ಮಾನ ಪಟೇಲ
ಕೊಲ್ಹಾರ 22: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತರ ಮುಖಂಡ ಕಾಂಗ್ರೆಸ್ ಪಕ್ಷದ ಉಸ್ಮಾನ್ ಪಟೇಲ್ ಖಾನ್ನವರ ಒತ್ತಾಯಿಸಿದರು.
ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಂಗತ ಶಾಮನೂರು ಶಿವಶಂಕರ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವುದು ನ್ಯಾಯಸಮ್ಮತ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದು, ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸುಲಭವಾಗಿ ಗೆಲುವು ಸಾಧಿಸಬಹುದು ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಕೊಡುಗೆ ಮಹತ್ವದ್ದಾಗಿದೆ. ಮುಸ್ಲಿಂ ಸಮಾಜ ಸದಾ ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿದ್ದು, ಅವರ ಬೇಡಿಕೆಗಳನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಹಿಂದಿನ ಚುನಾವಣೆಯಲ್ಲಿ ಶಾಮನೂರು ಶಿವಶಂಕರ್ಪ ಅವರು ಮುಂದಿನ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅನ್ನು ಅಲ್ಪಸಂಖ್ಯಾತರಿಗೆ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದೀಗ ಅವರ ಕುಟುಂಬದವರು ಮತ್ತೆ ಟಿಕೆಟ್ ಪಡೆಯಲು ಒತ್ತಡ ತರುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಶಾಮನೂರು ಕುಟುಂಬ ರಾಜಕೀಯವಾಗಿ ಬಲಿಷ್ಠವಾಗಿರಬಹುದು, ಆದರೆ ಅವರ ಗೆಲುವಿನ ಹಿಂದೆ ಅಲ್ಪಸಂಖ್ಯಾತರ ಬೆಂಬಲವಿದೆ ಎಂಬುದನ್ನು ಮರೆಯಬಾರದು ಹೀಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ಪಡೆದು, ಅವರ ಬೆಂಬಲದೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಹನೀಫ್ ಮಕಾನದಾರ, ಅಲ್ಲಾಭಕ್ಷ ಕಾಖಂಡಕಿ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಉಪಸ್ಥಿತರಿದ್ದರು.