ಅಥಣಿ

ನನಗೆ ಮಂತ್ರಿ ಸ್ಥಾನಕ್ಕಿಂತ ಬಸವೇಶ್ವರ ನೀರಾವರಿ ಯೋಜನೆಗೆ ಅನುದಾನ ಕೊಡಿ : ಶಾಸಕ ಶ್ರೀಮಂತ ಪಾಟೀಲ ಸಿ ಎಂ ಬೊಮ್ಮಾಯಿಗೆ ಆಗ್ರಹ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ನನಗೆ ಮಂತ್ರಿ ಸ್ಥಾನಕ್ಕಿಂತ ಬಸವೇಶ್ವರ ನೀರಾವರಿ ಯೋಜನೆಗೆ ಅನುದಾನ ಕೊಡಿ : ಶಾಸಕ ಶ್ರೀಮಂತ ಪಾಟೀಲ ಸಿ ಎಂ ಬೊಮ್ಮಾಯಿಗೆ ಆಗ್ರಹ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಲೋಕದರ್ಶನ ವರದಿ 


ಅಥಣಿ 25: ನನಗೆ ಮಂತ್ರಿ ಸ್ಥಾನಕ್ಕಿಂತ ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಪೂರ್ಣಗೊಳ್ಳಲು ಬೇಕಾದ ಅನುದಾನ ಕೊಡಿ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಿ ಎಂ ಬೊಮ್ಮಾಯಿ ಇವರನ್ನು ಆಗ್ರಹಿಸಿದರು. 

            ಅವರು ಚಮಕೇರಿ ಗ್ರಾಮದಲ್ಲಿ ಎಸ್‌.ಸಿ.ಪಿ ಯೋಜನೆಯಡಿ 1 ಕೋಟಿ ವೆಚ್ಚದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದ ಬರಗಾಲ ಪೀಡಿತ 30 ಗ್ರಾಮಗಳ 22 ಸಾವಿರ ಹೆಕ್ಟೇರ ಪ್ರದೇಶಕ್ಕೆ ನೀರಾವರಿ ಒದಗಿಸುವ ಈ ಯೋಜನೆ ಪೂರ್ಣಗೊಂಡಲ್ಲಿ ಸುಮಾರು 1.5 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದ ಅವರು ಕರೋನಾ ಸಾಂಕ್ರಾಮಿಕ ರೋಗದ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಉಂಟಾದ ವ್ಯತಿರಿಕ್ತ ಪರಿಣಾಮದಿಂದ ಬಿಹಾರದಿಂದ ಆಗಮಿಸಿದ್ದ ಕೂಲಿಕಾರರು ವಾಪಸ್ಸಾಗಿದ್ದರಿಂದ ಈ ಯೋಜನೆಗೆ ಹಿನ್ನಡೆಯಾಗಿದೆ ಎಂದರು. 

          ಖಿಳೆಗಾಂವ ಬಸವೇಶ್ವರ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡದ ಚಮಕೇರಿ, ಬ್ಯಾಡರಹಟ್ಟಿ, ಮಲಾಬಾದ, ಪಾರ್ಥನಹಳ್ಳಿ, ಗುಂಡೇವಾಡಿ ಸೇರಿದಂತೆ ಅನೇಕ ಗ್ರಾಮಗಳ 23 ಕೆರೆಗಳನ್ನು ತುಂಬಿಸುವ 230 ಕೋಟಿ ಯೋಜನೆಯ ಮಂಜೂರಾತಿಗಾಗಿಯೂ ಸಿಎಂ ಬೊಮ್ಮಾಯಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿದ್ದು ಕೆಲವೇ ದಿನಗಳಲ್ಲಿ ಈ ಯೋಜನೆಗೂ ಮಂಜೂರಾತಿ ದೊರಕಲಿದೆ ಎಂದರು.  

ಕಾಗವಾಡ ಮತಕ್ಷೇತ್ರ ರಸ್ತೆ ಅಭಿವೃದ್ಧಿಗಾಗಿ 500 ಕೋಟಿ ಅನುದಾನ ಬೇಕು ಈ ಪೈಕಿ ಈಗಾಗಲೇ 90 ಕೋಟಿ ಅನುದಾನ ಮಂಜೂರಾಗಿದೆ ಎಂದ ಅವರು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ಅಧಿಕಾರಗಳೊಂದಿಗೆ ಚರ್ಚಿಸಿರುವೆ. ಪರಿಸ್ಥಿತಿ ನೋಡಿ ಕುಡಿಯುವ ನೀರಿಗಾಗಿ ಪ್ರಸ್ತಾವನೆ ಸಲ್ಲಿಸುವೆ ಎಂದರು. 

          ಐನಾಪುರ ಪಟ್ಟಣದಲ್ಲಿ 40 ಲಕ್ಷ ವೆಚ್ಚದಲ್ಲಿ ಟಿಎಸ್‌ಪಿ ಯೋಜನೆಯಡಿ ಕಾಮಗಾರಿಗೆ, ಬೇಡರಹಟ್ಟಿ ಗ್ರಾಮದಲ್ಲಿ 1 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು ಹಾಗೂ ಬೇಡರಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳನ್ನು ಶ್ರೀಮಂತ ಪಾಟೀಲ ಉದ್ಘಾಟಿಸಿದರು. 

          ಬಿಜೆಪಿ ಧುರೀಣರಾದ ಶಿವಾನಂದ ಗೋಲಭಾವಿ, ನಿಂಗಪ್ಪ ಖೋಕಲೆ, ವಿನಾಯಕ ಬಾಗಡಿ, ರಾಮು ಸೊಡ್ಡಿ, ಭಾವು ಪತ್ತಾರ, ಚಮಕೇರಿ ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲಪ್ಪ ಪಡುವಲಕರ, ಉಪಾಧ್ಯಕ್ಷ ಅನಿತಾ ಕಾಂಬಳೆ, ಸದಸ್ಯರಾದ ಜ್ಯೋತಿಬಾ ಸೂರ್ಯವಂಶಿ, ಕಾಶಿನಾಥ ಬಿರಾದಾರ, ರಮೇಶ ಮಂಗರೂಳ, ರೇಖಾ ಮಂಗರೂಳ, ರವಿಕಾಂತ ಪಾಟೀಲ, ಅರ್ಜುನ ನಾಯಿಕ, ಶ್ರೀಮಂತ ಯಳವಂಕಿ, ಬಸು ನಾಯಿಕ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ವಂಟಮೂರಿ, ಗುತ್ತಿಗೆದಾರರಾದ ಶಂಕರ ಮದಣ್ಣವರ, ರಾಜು ಅಲಬಾಳ, ಬಾಲಚಂದ್ರ ಚವ್ಹಾಣ, ಸುಭಾಷ ಮಾಳಿ, ವಿಠ್ಠಲ್ ಸಂಕ್ರಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ