ಸೆ.25 ರಂದು ರೈತ ಸಂಘದಿಂದ ಘೇರಾವ್ ರೈತ ಮುಖಂಡ ಗಂಗಣ್ಣ
ಬ್ಯಾಡಗಿ 23: ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡದಿರುವ ಹಿನ್ನಲೆ ಸೆ.25 ರಂದು ಜನತಾದರ್ಶನಕ್ಕೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ ಸಂಘದ ಘೇರಾವ್ ಹಾಕಲಿದ್ದೇವೆ ಎಂದು ರೈತ ಮುಖಂಡ ಗಂಗಣ್ಣ ಎಲಿ ಎಚ್ಚರಿಸಿದರು.
ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಡಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಶಿಗ್ಗಾಂವ ಮತ್ತು ಹಾನಗಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಘೋಷಣೆಯಿಂದ ವಂಚಿತವಾಗಿವೆ, ಸದರಿ ವಿಷಯದ ಕುರಿತು ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸಿದರೂ ಸರ್ಕಾರ ಎಚ್ಚೆತ್ತುಕೊಳ್ಳದೇ ಇಂದಿಗೂ ಮೀನಮೇಷ ಮಾಡುತ್ತಿದೆ ಎಂದು ಆರೋಪಿಸಿದರು.
ಮಲತಾಯಿ ಧೋರಣೆ ನಿಲ್ಲಲಿ:ಅಧಿಕಾರಿಗಳು ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿಯಲ್ಲಿ ಯಾವುದೇ ಕಾರಣಕ್ಕೂ 3 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಲೇಬೇಕು ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ 3 ತಾಲ್ಲೂಕುಗಳು ಘೋಷಣೆಯಿಂದ ಹೊರಗುಳಿದಿವೆ ರಾಜ್ಯ ಸರ್ಕಾರ ಇಂತಹ ಮಲತಾಯಿ ಧೋರಣೆ ಕೈಬಿಡಬೇಕು ಕೂಡಲೇ ಬರಗಾಲ ಪೀಡಿತ ಎಂದು ಘೋಷಿಸುವ ಮೂಲಕ ರೈತರ ಹಿತಾಸಕ್ತಿ ಕಾಪಾಡುವಂತೆ ಆಗ್ರಹಿಸಿದರು.
ಕೇಂದ್ರದ ಕಡೆಗೆ ಬೊಟ್ಟು ನಿಲ್ಲಿಸಿ: ಹೊರಗುಳಿದ ಬ್ಯಾಡಗಿ ಮತ್ತು ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಆದರೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ, ಹೋಷಣೆಯಾಗಿರುವ ರಾಣೆಬೆನ್ನೂರ ಮತ್ತು ಹಿರೇಕೇರೂರ ಯಾವ ದೇಶದಲ್ಲಿವೆ..? ಎಂದು ಪ್ರಶ್ನಿಸಿದ ಅವರು, ಶ್ರೀನಿವಾಸ್ ಮಾನೆ ಅವರೊಬ್ಬ ಅನನುಭವಿ ಶಾಸಕರು ಎಂ ಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ, ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದಾಗ್ಯೂ ಬರಗಾಲ ಘೋಷಿಸಲು ಅಸಹಾಯ ಕರಾಗಿದ್ದು ಅದನ್ನು ಮರೆಮಾಚಲು ಕೇಂದ್ರದ ಕಡೆಗೆ ಕೈತೋರುತ್ತಿದ್ದು ಯಾವುದೇ ಕಾರಣಕ್ಕೂ ರೈತರಿಗೆ ತಪ್ಪು ಮಾಹಿತಿ ನೀಡದಂತೆ ಎಚ್ಚರಿಸಿದರು.
ಸ್ಪಷ್ಟೀಕರಣ ಕೊಡಿ ಇಲ್ಲದಿದ್ದರೆ ಸಂಸದರಿಗೂ ಘೇರಾವ್: ರೈತ ಸಂಘದ ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರು ಮಾತನಾಡಿ, ಕಳೆದ 4 ವರ್ಷದ ಹಿಂದೆ ಮತ ಕೇಳಲು ಬಂದಿದ್ದ ಹಾವೇರಿ ಸಂಸದ ಶಿವಕುಮಾರ ಉದಾಸಿ ಇಲ್ಲಿಯವರೆಗೂ ನಮ್ಮ ಸಂಕಷ್ಟವನ್ನು ಕೇಳಿಲ್ಲ, ತಾವು ಪ್ರತಿನಿಧಿಸುವ ಹಾವೇರಿ ಜಿಲ್ಲೆಯಲ್ಲಿ 3 ತಾಲೂಕುಗಳನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿದ್ದರೂ ಇಲ್ಲಿಯವರೆಗೂ ಚಕಾರವೆತ್ತಿಲ್ಲ, ಅಷ್ಟಕ್ಕೂ ಶ್ರೀನಿವಾಸ ಮಾನೆ ಬರಗಾಲ ಘೋಷಣೆಗೆ ಕೇಂದ್ರದ ನೀತಿಗಳು ಅಡ್ಡಿಪಡಿಸುತ್ತಿವೆ ಎಂಬುದಾಗಿ ಹೇಳಿಕೆ ನೀಡಿದ್ದು ಅದಕ್ಕೆ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದ ಅವರು, ಸಂಸದರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಸಹ ಅವರಿಗೂ ಸಹ ಇನ್ನು ಮುಂದೇ ಘೇರಾವ್ ಹಾಕಲಿದ್ದೇವೆ ಎಂದರು.
ಸಚಿವರು ಕ್ಷಮೆ ಕೇಳಲೇಬೇಕು: ರೈತರು ಪರಿಹಾರ ಮೊತ್ತಕ್ಕಾಗಿ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಒಂದು ವೇಳೆ ಸಚಿವರು ಆತ್ಮಹತ್ಯೆ ಮಾಡಿಕೊಂಡಲ್ಲಿ ರೈತ ಸಂಘ ಅವರಿಗೆ 50 ಲಕ್ಷ ಪರಿಹಾರ ನೀಡಲಿದೆ ಮತ್ತು ಜಿಲ್ಲೆಯಲ್ಲಿ ಬೆಳೆನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಾಂತ್ವನ ಹೇಳುವಂತೆ ಆಗ್ರಹಿಸಿದರು.
ಈ ವೇಳೆ ಮೌನೇಶ ಕಮ್ಮಾರ, ಕಿರಣಕುಮಾರ ಗಡಿಗೋಳ, ಸಂತೋಷ ಬಡ್ಡಿಯವರ, ಡಾ.ಕೆ.ವಿ.ದೊಡ್ಡಗೌಡ್ರ, ಜಾನ್ ಪುನೀತ್ ನಿಂಗಪ್ಪ ಅಂಗರಗಟ್ಟಿ, ಪ್ರಕಾಶ ಸಿದ್ಧಪ್ಪನವರ, ಈಶ್ವರ ಅಜಗೊಂಡರ, ಶಂಕರ್ಪ ಮರಗಾಲ, ಪ್ರಕಾಶ ಕದರಮಂಡಲಗಿ ಸೇರಿದಂತೆ ಇನ್ನಿತರರಿದ್ದರು.