ಆತ್ಮ ನಿರ್ಭರ ನಿಧಿ ಕಿರು ಸಾಲ ಸೌಲಭ್ಯ ಯೋಜನೆ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಿ: ಮುಗಳಿ
ಶಿಗ್ಗಾವಿ 07: ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಬೀದಿ ಬದಿ ವ್ಯಾಪಾರಸ್ಥರು ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಕಿರು ಸಾಲ ಸೌಲಭ್ಯ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಂ ಕೆ ಮುಗಳಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ, ಉದ್ದಿಮೆ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಪುರಸಭೆ ಕಾರ್ಯಾಲಯ ಶಿಗ್ಗಾಂವಿ ಸಹಯೋಗದಲ್ಲಿ ನಡೆದ ಭಾರತ ಸರ್ಕಾರದ ಡೇ ನಲ್ಮ ಯೋಜನೆಯಡಿ ಬಿದಿ ಬದಿ ವ್ಯಾಪಾರ ಮಾಡುವವರಿಗೆ, ಸಾಲ ಸೌಲಭ್ಯ ನೀಡುವ ಹಾಗೂ ಭಾರತ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಬಸವರಾಜಪ್ಪ ಮಾತನಾಡಿ ಸಾಲ ಪಡೆದ ವ್ಯಾಪಾರಸ್ಥರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿ ಮಾಡಬೇಕು ಮತ್ತು ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾಶ್ ಬ್ಯಾಕ್ ಮೂಲಕ ಸಿಗುವ ಲಾಭವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ರಾಜು ಕೆಂಭಾವಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯ ಮಾಹಿತಿ ನೀಡುವುದರ ಜೊತೆಗೆ ಕ್ಯೂ ಆರ್ ಕೋಡ್ ಬಳಸಿ ಡಿಜಿಟಲ್ ವ್ಯವಹಾರದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನ ಅಧಿಕಾರಿ ಶೈಲಜಾ ಪಾಟೀಲ, ಮತ್ತು ವಿವಿಧ ಬ್ಯಾಂಕ್ ವ್ಯವಸ್ಥಾಪಕರು, ಪುರಸಭೆ ಅಧಿಕಾರಿಗಳು, ಬೀದಿ ಬದಿಯ ವ್ಯಾಪಾರಿಗಳು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಭಾಗವಹಿಸಿದ್ದರು.