ಗೀತಾ ಸಾವು ಪ್ರಕರಣ : ಸ್ಥಳಕ್ಕೆ ಶಾಸಕಿ ಭೇಟಿ, ಗೀತಾ ಮಗಳಿಗೆ 1 ಲಕ್ಷ ರೂ. ಘೋಷಣೆ
ಕಾರವಾರ 19: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿಸಿ ಎಂದು ಆಗ್ರಹಿಸುತ್ತಿರುವ ಧರಣಿ ನಿರತರ ಸ್ಥಳಕ್ಕೆ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಮಧ್ಯಾಹ್ನ 2,30 ರ ಸುಮಾರಿಗೆ ಭೇಟಿ ನೀಡಿದರು.
ಗೀತಾ ಅವರ ಆರು ತಿಂಗಳ ಮಗುವನ್ನು ಎತ್ತಿಕೊಂಡು ಸಂತೈಸಿದ ಅವರು ಮಗುವಿನ ಶಿಕ್ಷಣಕ್ಕೆ ವಯಕ್ತಿಕವಾಗಿ ಒಂದು ಲಕ್ಷ ರೂ. ನೀಡುವುದಾಗಿ, ಆ ಹಣವನ್ನು ಮಗುವಿನ ಹೆಸರಲ್ಲಿ ಠೇವಣಿ ಇಡಿ ಎಂದು ಕುಟುಂಬಸ್ಥರಿಗೆ ಕೇಳಿಕೊಂಡರು. ಇದೇ ವೇಳೆ ಧರಣಿಯ ನೇತೃತ್ವವಹಿಸಿರುವ ಮುಖಂಡರಾದ ರಾಜು ತಾಂಡೇಲ್ ಅವರು ಶಾಸಕಿ ರೂಪಾಲಿ ನಾಯ್ಕರಲ್ಲಿ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ವೈದ್ಯನೋರ್ವನ ದಬ್ಬಾಳಿಕೆ ಹಾಗೂ ತುರ್ತು ಚಿಕಿತ್ಸೆಗೆ ಬಂದವರಿಗೆ ಮಾಡುವ ತಪ್ಪು ಮಾರ್ಗದರ್ಶನಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಗೀತಾ ಸಾವಿಗೆ ಕಾರಣವಾಗಿರುವ ಆತನನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದರು.
ಗೀತಾ ಸಾವಿನ ತನಿಖಾ ಹೋರಾಟ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ 5ನೇ ದಿನ ಮುಗಿಸಿ, ಆರನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತರಿಗೆ ಶುಕ್ರವಾರ ಬೇಲೇಕೇರಿ, ಅಂಕೋಲಾ ಭಾಗದ ಮೀನುಗಾರರ ಮುಖಂಡರು ಹಾಗೂ ಮೀನುಗಾರರು ಬೆಂಬಲ ನೀಡಿ, ಧರಣಿಯಲ್ಲಿ ಭಾಗವಹಿಸಿದ್ದರು.
ಗೀತಾ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು ಹಾಗೂ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತ್ ಮಾಡಿ, ಬೇರೆಡೆಗೆ ಕಳುಹಿಸಿ ಎಂದು ಆಗ್ರಹಿಸಿದರು. ವಿನಾಯಕ ಹರಿಕಂತ್ರ, ರಾಜು ತಾಂಡೇಲ ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿದ್ದರು.
ಧರಣಿ ನಿರತರ ಮಾತು ಆಲಿಸಿದ ನಂತರ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ನಾನು ಈ ಘಟನೆಯ ಬಗ್ಗೆ ಸದನದಲ್ಲಿ ಕಣ್ಣೀರು ಹಾಕಿದ್ದೇನೆ. ಎಲ್ಲಾ ವಿಷಯ ಸರ್ಕಾರಕ್ಕೆ ಗೊತ್ತಿದೆ. ಮುಖ್ಯಮಂತ್ರಿಗಳಿಗೆ ಸಹ ವಿಷಯ ತಿಳಿಸಿದ್ದೇನೆ, ಸಹನೆ ಯಿಂದ ಇರಬೇಕು.ನ್ಯಾಯ ಸಿಗಲಿದೆ. ನಾನು ಇಲ್ಲಿ ಏನು ಬಹಿರಂಗವಾಗಿ ಹೇಳುವುದಿಲ್ಲ. ಮಾಡುವ ಕೆಲಸ ಮಾಡಿಯೇ ತೀರುತ್ತೇನೆ. ನಾನು ಧರಣಿ ನಿರತರ ಪರ ಇದ್ದೇನೆ. ನಿಮ್ಮ ಬೇಡಿಕೆಗಳು ನನ್ನವೂ ಸಹ. ಹೆಣ್ಣು ಮಕ್ಕಳ ಕಣ್ಣೀರು ನನಗೆ ಗೊತ್ತಿದೆ. ಗೀತಾ ಬಾನಾವಳಿ ಅವರ ಕುಟುಂಬದ ಶಾಪ ವೈದ್ಯನಿಗೆ ತಟ್ಟಿಲಿದೆ ಎಂದರು.
ಗೀತಾ ಬಾನಾವಳಿ ಸಾವಿನ ಪ್ರಕರಣದಲ್ಲಿ ಧರಣಿ ನಿರತರಿಗೆ ನ್ಯಾಯ ಸಿಗಲಿದೆ. ಮುಖ್ಯಮಂತ್ರಿಗಳು ಕಾರವಾರಕ್ಕೆ ಬರಲಿದ್ದು, ಇಲ್ಲಿನ ಅವ್ಯವಸ್ಥೆಗಳು ಸರಿಹೋಗಲಿವೆ.
- ರೂಪಾಲಿ ನಾಯ್ಕ.
ಶಾಸಕರು. ಕಾರವಾರ ವಿಧಾನಸಭಾ ಕ್ಷೇತ್ರ