ಗಣೇಶ ಹಬ್ಬದ ಮತ್ತು ಇದ್ ಮಿಲಾದ್ ಹಬ್ಬದ ಶಾಂತಿ ಸಭೆ
ಯರಗಟ್ಟಿ 06: ಮುಂಬರುವ ಗಣೇಶ ಹಬ್ಬದ ವೇಳೆ ಗಣೇಶನ ಮೂರ್ತಿ ಕೂಡಿಸುವವರು ಪೆಂಡಾಲ್ ಹಾಕುವ ಮುಂಚೆ ಸ್ಥಳದ ಮಾಲೀಕರು ಹಾಗೂ ಪಪಂ/ ಗ್ರಾಪಂ, ಹೆಸ್ಕಾಂಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸಿಪಿಐ ಆಯ್. ಎಂ. ಮಠಪತಿ ಹೇಳಿದರು.
ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ಆವರಣದಲ್ಲಿ ಜರುಗಿದ ಗಣೇಶ ಹಬ್ಬ ಹಾಗೂ ಇದ್-ಮಿಲಾದ್ ನಿಮಿತ್ತದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಮೂರ್ತಿ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆವರೆಗೆ ದಿನದ 24 ಗಂಟೆ ಸ್ಥಳದಲ್ಲಿ ಇಬ್ಬರು ಸ್ವಯಂ ಸೇವಕರನ್ನು ನೇಮಿಸಬೇಕು. ಪೆಂಡಾಲ್ಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಡಿಜೆ ಬ್ಯಾನ್ ಮಾಡಲಾಗಿದೆ ಎಂದರು.
ಡಿವೈಎಸ್ಪಿ ರಾಮನಗೌಡ ಹಟ್ಟಿ ಮಾತನಾಡಿ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಮಸೀದಿ ಮುಂದೆ ಕುಣಿಯಬಾರದು, ಡಿಜೆಗಳನ್ನೂ ಬಳಸಬಾರದು. ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಎಲ್ಲ ನಿಯಮಗಳನ್ನು ಮೂರ್ತಿ ಪ್ರತಿಷ್ಠಾಪಿಸುವವರಿಗೆ ತಿಳಿಸಬೇಕು ಎಂದು ಡಿವಾಯ್ಎಸ್ಪಿ ಅವರಿಗೆ ಸೂಚಿಸಿದರು.
ಗಲಭೆಗಳನ್ನು ಸೃಷ್ಟಿಸಬಾರದು ಎಂದು ರೌಡೀಶೀಟರ್ಗಳಿಂದ ಈಗಾಗಲೇ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಹಾಗೂ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಮದ್ಯಪಾನ ಹಾಗೂ ಜೂಜಾಟ ಆಡಬಾರದು. ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಹೇಳಿದರು.
ತಹಸೀಲ್ದಾರ ಪಿಎಸ್ಐ ಎಮ್ ಹಿರೇಗೌಡರ, ಶಿರಸ್ತೇದಾರ ಸಿದ್ದು ಕುಲಕರ್ಣಿ, ಪ. ಪಂ. ಸಿಬ್ಬಂದಿಯಾದ ಮಲ್ಲಿಕಾ ಸಿಕ್ಕಲಗಿ, ಹೆಸ್ಕಾಂ ಶಾಖಾಧಿಕಾರಿ ಮಹಾಂತೇಶ ಹಿರೇಮಠ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು, ಗಜಾನನ ಮಂಡಳಿ ಮುಖಂಡರು ಹಾಗೂ ಹಿಂದೂ ಮುಸ್ಲಿಂ ಬಾಂಧವರು ಇದ್ದರು.