ಧಾರವಾಡ - ಹುಬ್ಬಳ್ಳಿ

ಗಾಂಧಿಜೀಯವರ ಸ್ಮರಣೆಯೊಂದಿಗೆ ಅವರ ಸಂಸ್ಕಾರವು ಬೆಳೆದು ಬರಬೇಕು; ನಡೆ-ನುಡಿ ಒಂದಾಗಿರಬೇಕು: ಭುವನೇಶ ಪಾಟೀಲ

ಗಾಂಧಿಜೀಯವರ ಸ್ಮರಣೆಯೊಂದಿಗೆ ಅವರ ಸಂಸ್ಕಾರವು ಬೆಳೆದು ಬರಬೇಕು;  ನಡೆ-ನುಡಿ ಒಂದಾಗಿರಬೇಕು:  ಭುವನೇಶ ಪಾಟೀಲ

ಧಾರವಾಡ ಸೆ.6: ಮಹಾತ್ಮಾ ಗಾಂಧಿಜೀ ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದರು. ಮತ್ತು ನಡೆದಂತೆ ನುಡಿದರು. ಅವರ ಸ್ಮರಣೆಯೊಂದಿಗೆ ಅವರ ಜೀವನ ಸಂದೇಶಗಳನ್ನು, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.  

ಅವರು ಇಂದು (ಸೆ.6) ಮಧ್ಯಾಹ್ನ, ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಸಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ, ತಾಲೂಕಾ ಹಂತದಲ್ಲಿ ಪ್ರಬಂಧ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಮಾತನಾಡಿದರು.  

ಗಾಂಧಿಜೀ ಅವರದ್ದು, ಭಾರತವು ಸೂರ್ಯ ಚಂದ್ರರು ಇರುವವರೆಗೆ ಸ್ಮರಿಸುವಂತಹ ವ್ಯಕ್ತಿತ್ವ. ಸ್ವಾತಂತ್ರ್ಯ ಚಳುವಳಿಗೆ ತಮ್ಮನ್ನು ತಾವು ಅರ​‍್ಿಸಿಕೊಂಡು ಬದುಕಿನ ಕೊನೆಯವರೆಗೂ ಆದರ್ಶರಾಗಿ ಉಳಿದುಕೊಂಡವರು. ಇಂತಹ ಮಹಾತ್ಮರ ಜೀವನ ಚರಿತ್ರೆ, ಜೀವನ ಸಂದೇಶ ಮತ್ತು ಅವರ ನೀತಿ ಬೊಧನೆಗಳು ಇಂದಿನ ಯುವ ಸಮಾಜಕ್ಕೆ ಸ್ಪೂರ್ತಿದಾಯಕ ಮತ್ತು ಮಾರ್ಗದರ್ಶಿ ಆಗಬೇಕು ಎಂದರು.  

ಗಾಂಧಿಜೀ ಅವರು ತಾವು ಪ್ರಯೋಗಿಸಿ, ಕಂಡುಕೊಂಡ ಸತ್ಯವನ್ನು ಇತರರಿಗೆ ತಿಳಿಸಿದರು. ಸತ್ಯ, ಅಹಿಂಸೆಯ ಪರಿಕಲ್ಪನೆಯ ಜೊತೆಗೆ ಅಹಿಂಸಾತ್ಮಕ ಬದಕನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಏರಿ​‍್ಡಸುವ ಮೂಲಕ ಗಾಂಧಿ ಚಿತ್ರಣವನ್ನು ಎಲ್ಲರ ಮನದಲ್ಲಿ ಕಟ್ಟಿಕೊಡುವುದು ಈ ಪ್ರಬಂಧ ಸ್ಪರ್ಧೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.  

ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಗಾಂಧೀಜಿಯವರ ಜೀವನದ ಬಗ್ಗೆ ಬರೆಯುವುದು ಅಷ್ಟೊಂದು ಸುಲಭವಲ್ಲ. ಅವರು ಜೀವನದಲ್ಲಿ ನಡೆದು ಬಂದ ದಾರಿಯೂ ಕಷ್ಟಕರವಾಗಿತ್ತು. ಅವರ ತ್ಯಾಗಮಯಿ ಬದುಕು ಮಾದರಿಯಾಗಿತ್ತು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.  

ಅವರ ಸರಳ ಜೀವನ, ಸತ್ಯ ಮತ್ತು ಅಹಿಂಸೆಯ ಮಾರ್ಗವು ನಮಗೆಲ್ಲರಿಗೂ ಆದರ್ಶಪ್ರಾಯ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಚಿಂತನೆಗೆ ಹಚ್ಚುವುದಲ್ಲದೆ, ದೇಶದ ಇತಿಹಾಸ ಮತ್ತು ಮಹಾನ್ ನಾಯಕರ ಬಗ್ಗೆ ತಿಳುವಳಿಕೆ ಮೂಡಿಸುತ್ತವೆ  ಎಂದರು.  

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ ಅವರು ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯವೂ ತ್ಯಾಗ ಬಲಿದಾನದಿಂದ ಬಂದಿದೆ. ಆದರಿಂದ ಜೀವನದಲ್ಲಿ ಪರಿಶ್ರಮ ಎನ್ನುವುದು ಅತಿ ಮುಖ್ಯವಾದ ಸಂಗತಿ ಎಂದು ಹೇಳಿದರು. 

ಜೀವನದಲ್ಲಿ ಕೇವಲ ಶಾಲೆ ಕಾಲೇಜುಗಳ ಪಠ್ಯ ಪುಸ್ತಕಗಳನ್ನು ಓದುವುದು ಅಷ್ಟೇ ಅಲ್ಲ. ಮಹಾನ್ ನಾಯಕ, ನಾಯಕಿಯರ ಬಗ್ಗೆ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳಬೇಕು. ಅದೇ ರೀತಿ ನೈತಿಕ ಮೌಲ್ಯಗಳನ್ನು ಸಹ ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಗಾಂಧಿವಾದಿ, ಅದರಗುಂಚಿ ಶಂಕರಗೌಡರ ಸಹೋದರ, ಏಕೀಕರಣದ ಹೋರಾಟಗಾರ ವಿರುಪಾಕ್ಷಗೌಡ ಪಾಟೀಲ ಅವರು ಮಾತನಾಡಿ, ಬ್ರಿಟಿಷರು ಕೇವಲ ವ್ಯಾಪಾರಕ್ಕೆ ಬಂದು ಭಾರತವನ್ನು ಸುತ್ತುವರೆದು ನಮ್ಮನ್ನು ಆಳುವಂಥವರಾದರು. ಅವರಿಂದ ಮುಕ್ತಿಗೊಳಿಸುವುದುಕ್ಕೋಸ್ಕರವಾಗಿ ಗಾಂಧೀಜಿಯವರು ಸತ್ಯಾಗ್ರಹ, ಅಹಿಂಸೆ, ಅಸಹಕಾರ ಚಳುವಳಿ, ಉಪ್ಪು ಸತ್ಯಾಗ್ರಹ, ಭಾರತ ಚಲೋ ಚಳುವಳಿ ಮುಂತಾದ ಹಲವಾರು ಹೋರಾಟಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಿದರು ಎಂದು ಹೇಳಿದರು. 

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಎಸ್‌.ಎಸ್‌. ಅಂಗಡಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ವೇದಿಕೆಯಲ್ಲಿ ಮನಗುಂಡಿ ಪ್ರೌಢ ಶಾಲೆಯ ಇಂಗ್ಲೀಷ್ ಸಹ ಶಿಕ್ಷಕ ಸಿ.ಸಿ.ಹಿರೇಮಠ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ತಟಗಾರ ಇದ್ದರು.   

ಅಭಿನಂದನಾ ಪತ್ರ: ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಹಾಗೂ ಅತಿಥಿಗಳು ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ, ಶುಭ ಹಾರೈಸಿದರು. 

ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಜಿಲ್ಲಾ ನೊಡಲ್ ಅಧಿಕಾರಿಗಳಾದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಕನ್ನಡ ಪ್ರಾಧ್ಯಾಪಕಿ ಡಾ. ಸರಸ್ವತಿದೇವಿ ಭಗವತಿ, ನಿಗದಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಭದ್ರನ್ ಮತ್ತು ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯದ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಡಾ. ರೇಣುಕಾ ಅಮಲಝರಿ ಅವರನ್ನು ಸಿಇಓ ಭುವನೇಶ ಪಾಟೀಲ ಅವರು ಅಭಿನಂದನಾ ಪತ್ರ ನೀಡಿ, ಗೌರವಿಸಿದರು.  

 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಅವರು ಸ್ವಾಗತಿಸಿ, ಪ್ರ್ರಾಸ್ತಾಪಿಕವಾಗಿ ಮಾತನಾಡಿದರು. ಡಾ. ಸರಸ್ವತಿದೇವಿ ಭಗವತಿ ಅವರು ಕಾರ್ಯಕ್ರಮ ನಿರೂಪಿಸಿದರು.  ಶ್ರೀಧರ ಹೆಗಡೆ ಭದ್ರನ್ ಅವರು ವಂದಿಸಿದರು.  

ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಆಯಾ ಶಾಲಾ ಕಾಲೇಜುಗಳ ಶಿಕ್ಷಕರು, ಸರ್ಕಾರಿ ಪ್ರಥಮ ದರ್ಜೆ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ