ಮದ್ಯವರ್ಜನ ಶಿಬಿರಾರ್ಥಿಗಳೊಂದಿಗೆ ಗಾಂಧಿ ಸ್ಮೃತಿ ಜಾಥಾ ಕಾರ್ಯಕ್ರಮ
ಯರಗಟ್ಟಿ 09: ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ನವ ಜೀವನ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮದ್ಯವರ್ಜನ ಶಿಬಿರಾರ್ಥಿಗಳೊಂದಿಗೆ ತಾಲೂಕು ಯೋಜನಾ ವ್ಯಾಪ್ತಿಯ ಸ್ಥಳೀಯ ಬಸವೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಗಾಂಧಿ ಸ್ಮೃತಿ ಮತ್ತು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ಪ್ರೌಢ ಶಾಲೆಯವರೆಗೆ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಬಿಟ್ರೀಷರ ದಾಸ್ಯದಿಂದ ರಾಷ್ಟ್ರದ ಜನರನ್ನು ಸಂರಕ್ಷಿಸಿದ ಕೀರ್ತಿ ಮಹಾತ್ಮ ಗಾಂಧೀಜಿಯವರದ್ದು, ಗಾಂಧೀಜಿ ಈ ರಾಷ್ಟ್ರಕ್ಕೆ ನೀಡಿದ ಮಹಾನ್ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಂದು ಕುಟುಂಬವೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅಡ್ಡಿಯಾಗಬಹುದಾದ ಮದ್ಯಪಾನವನ್ನು ತ್ಯಜಿಸುವಂತೆ ರಾಷ್ಟ್ರೀಯ ಮಟ್ಟದ ಅಂದೋನಕ್ಕೆ ಚಾಲನೆ ನೀಡಿದವರು ಮಹಾತ್ಮ ಗಾಂಧೀಜಿಯವರು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ವರ್ಷಗಳಿಂದ ಹಳ್ಳಿ, ನಗರ, ರಾಜ್ಯ ಹಾಗೂ ರಾಷ್ಟ್ರ ವ್ಯಾಪ್ತಿ ಶಾಖೆಗಳನ್ನು ಹೊಂದಿ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸಲು ಸಶಕ್ತರನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೆಲಸ ಶ್ಲಾಘನೀಯ ಎಂದು ಮಾತನಾಡಿದ ಮಾಜಿ ಜಿ.ಪಂ. ಸದಸ್ಯ ಅಜೀತಕುಮಾರ ದೇಸಾಯಿ ಹೇಳಿದರು ಅವರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಶಿಕ್ಷಣ ಮತ್ತು ಆರ್ಥಿಕ ಸದೃಢತೆಯನ್ನು ಅವಲಂಬಿಸಿದೆ. ಶಿಕ್ಷಣದಿಂದ ಧೈರ್ಯ, ಶಕ್ತಿ, ಸಾಮಾಜಿಕ ಗೌರವ ಮತ್ತು ಆರ್ಥಿಕ ಸದೃಢತೆಯಿಂದ ಕುಟುಂಬದ ಅಭಿವೃದ್ಧಿಯಾಗಲಿದೆ. ಮಹಿಳೆ ಆರ್ಥಿಕವಾಗಿ ಸದೃಢಗೊಳ್ಳಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರೂಪಿಸಿದ ಯೋಜನೆ ಸಹಕಾರಿಯಾಗಿದೆ. ಸಾಲ ಮರು ಪಾವತಿ ಮತ್ತು ಪ್ರಾಮಾಣಿಕತೆ ವಿಚಾರದಲ್ಲಿ ಮಹಿಳೆಯರು ಮುಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಗ್ರಾಮಾಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜನಜಾಗೃತಿ ಸ್ಥಾಪಕ ಅಧ್ಯಕ್ಷ ಸೋಮಶೇಖರ ಮಗದುಮ, ಕೆಎಂಎಫ್ ನಿರ್ದೇಶಕ ಎಸ್ ಎಸ್ ಮುಗಳಿ, ಜನಜಾಗೃತಿ ಜಿಲ್ಲಾಧ್ಯಕ್ಷ ಸುಭಾಷ ಹನಸಿ, ಜನಜಾಗೃತಿ ಜಿಲ್ಲಾ ಕಾರ್ಯದರ್ಶಿ ಎಚ್. ಆರ್. ರವಿಕುಮಾರ್, ಕ್ಷೇತ್ರ ಯೋಜನಾಧಿಕಾರಿ ಸತೀಶ್ ಡಿ, ರಮೇಶ ದೇವರಡ್ಡಿ, ಜೆ ರತ್ನಾಕರ ಶೆಟ್ಟಿ, ವೀರನಗೌಡ ಸರನಾಡಗೌಡ್ರ, ಮಹಾಂತೇಶ ಕಾಜಗಾರ, ಈರಗೌಡ ಪಾಟೀಲ, ಈಶ್ವರ ಕರಿಕಟ್ಟಿ, ಅಶೋಕ ಕುರುಗೋಡ, ಸಿದ್ದಪ್ಪ ಇಂಗಳಗಿ, ಎಎಸ್ಐ ಬಿ. ಕೆ. ರಂಗಣ್ಣವರ, ಸೋಮು ರೈನಾಪೂರ, ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ಜಿಲ್ಲಾ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ನವಜೀವನ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಮುಖಂಡರು ಇದ್ದರು.