ಮೊದಲ ಗ್ರಾಮ ವಾಸ್ತವ್ಯ ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಗೆ ಅಧಿಕಾರಿ ವರ್ಗ ಶ್ರಮಿಸಬೇಕು: ಜಿಲ್ಲಾಧಿಕಾರಿ
ಕಾರವಾರ 20: ಸರಕಾರದ ಆದೇಶದಂತೆ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶನಿವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್ ಎಂ.ಪಿ. ಅವರು ಉದ್ಘಾಟಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಥಮಬಾರಿಗೆ ಜಿಲ್ಲಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದೇನೆ. ಜಿಲ್ಲಾಧಿಕಾರಿ ಆಗಬೇಕು ಎಂಬ ನಿಟ್ಟಿನಲ್ಲಿ ಐಎಎಸ್ ಪರೀಕ್ಷೆ ಮಾಡಿದ್ದು, ಬಹಳ ವರ್ಷದ ಕನಸು ನನಸಾಗಿದೆ. ಐಬಿಯಿಂದ ಕಚೇರಿ ಹಾಗೂ ಕಚೇರಿಯಿಂದ ಐಬಿ ಹೊರತುಪಡಿಸಿ ಕಾರವಾರ ನಗರದ ಒಳಗಡೆಯೂ ಪ್ರವೇಶಿಸಿ ನೋಡಿಲ್ಲ. ಅದಲ್ಲದೇ ಮೊಟ್ಟ ಮೊದಲನೆಯದಾಗಿ ನನ್ನ ಈ ಜಿಲ್ಲಾಧಿಕಾರಿ ವೃತ್ತಿ ಸೇವೆಯನ್ನ ಹಾಡವಳ್ಳಿ ಗ್ರಾಮದಿಂದ ಆರಂಬಿಸುತ್ತಿದ್ದೇನೆ. ಆದ್ದರಿಂದ ನನ್ನ ಜನ್ಮದುದ್ದಕ್ಕೂ ಹಾಡವಳ್ಳಿ ಗ್ರಾಮ ನನ್ನ ನೆನಪಿನಿಂದ ಮರೆಯಾಗುವುದಿಲ್ಲ. ಹೀಗಾಗಿ ಮುಗ್ಧ ಮನಸ್ಸಿನಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮದ ಎಲ್ಲರ ಆಶಿರ್ವಾದ ಜಿಲ್ಲಾಧಿಕಾರಿ ವೃತ್ತಿ ಸೇವೆಗೆ ಅಗತ್ಯವಾಗಿದೆ ಎಂದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉತ್ತಮ ಹಾಗೂ ಉನ್ನತ ಮಟ್ಟದ್ದಾಗಿದೆ. ಹೀಗಾಗಿದ ಇದನ್ನು ಒಳ್ಳೆಯ ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಜಿಲ್ಲಾಡಳಿತ, ಕಂದಾಯ ಇಲಾಖೆ, ಅಧಿಕಾರಿಗಳ ವರ್ಗ ಸಾರ್ವಜನಿಕರಿಂದ ತುಂಬಾ ದೂರದಲ್ಲಿದೆ ಎಂಬ ಮನೋಭಾವ ಜನಸಾಮಾನ್ಯರಲ್ಲಿದೆ. ಅದೂ ವಿಶೇಷವಾಗಿ ಈ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರದ ಯಾವುದಾದರೂ ಯೋಜನೆಯ ಸೌಲಭ್ಯ ಸಿಗಬೇಕಾದರೆ ಸಣ್ಪುಟ್ಟ ಕಾರ್ಯಕ್ಕೆ ಜಿಲ್ಲಾ, ತಾಲೂಕಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಹಾಡವಳ್ಳಿಯಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರಲು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಸುಮಾರು ನಾಲ್ಕು ಗಂಟೆ ಪ್ರಯಾಣ ಬೆಳೆಸಬೇಕಿದೆ. ಅದು ಸರಿಯಾಗಿ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಇದೆಲ್ಲದರ ಮದ್ಯೆ ಅವತ್ತಿನ ಖರ್ಚಿನ ಜೊತೆಗೆ ದುಡಿಮೆಯೂ ಹಾಳಾಗುತ್ತದೆ ಎಂದರು. ಸಾರ್ವಜನಿಕರಲ್ಲಿ ಆಡಳಿತ ಮತ್ತು ಅಧಿಕಾರಿಗಳ ವರ್ಗ ದೂರವಿದೆ ಎಂಬ ಭಾವನೆ ಹೋಗಲಾಡಿಸಲು ಸರಕಾರ ಹಾಗೂ ಕಂದಾಯ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ. ಇಡಿ ಪೂರ್ತಿದಿನ ಗ್ರಾಮದಲ್ಲಿದ್ದು, ಆಹವಾಲು ಕೇಳಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಇದೊಂದು ಅವಕಾಶವಾಗಿದೆ. ಪ್ರಸ್ತುತ ದಿನಗಳಲ್ಲಿ ಎಲ್ಲವೂ ಲಭ್ಯವಿದೆ. ಆದರೆ ಒಂದು ಜನನ, ಮರಣ, ಜಾತಿ, ಆದಾಯದಂತ ಪ್ರಮಾಣ ಪತ್ರಗಳು ಸಿಗಬೇಕಾದರೆ ಜನಸಾಮಾನ್ಯರು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆಯನ್ನ ಇನ್ನಷ್ಟು ಸರಳಿಕರಣಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಜೋತೆಗೆ ಮುಂಬರುವ ದಿನಗಳಲ್ಲಿ ಯಾವುದೇ ಅರ್ಜಿ ಹಾಕದೆನೇ ತಂತ್ರಜ್ಞಾನದ ಮೂಲಕವೇ ಜನರಿಗೆ ಸರಕಾರಿ ಸೌಲಭ್ಯಗಳು ನೇರವಾಗಿ ದೊರೆಯುವಂತ ಕಾರ್ಯಕ್ರಮಗಳನ್ನ ಕಂದಾಯ ಇಲಾಖೆ ರೂಪಿಸುತ್ತಿದೆ. ಇದರಿಂದ ಸಾರ್ವಜನಿಕರ ಸರಕಾರಿ ಕಚೇರಿಗಳ ಅಲೆದಾಟ ತಪ್ಪಲಿದೆ ಎಂದು ತಿಳಿಸಿದರು.3486 ಜನ ಸಂಖ್ಯೆಯಿರುವ ಈ ಗ್ರಾಮದಲ್ಲಿ ಆಯೋಜಿಸಿರುವ ಗ್ರಾಮ ವಾಸ್ತವ್ಯದ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಶಿಲ್ದಾರರು, ಉಪವಿಭಾಗದ ಅಧಿಕಾರಿಗಳು ಅವರ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಸಲಿದ್ದಾರೆ. ಕಂದಾಯ ಇಲಾಖೆಯ ಎಲ್ಲ ಮಟ್ದ ಅಧಿಕಾರಿಗಳು ದಿನಪೂರ್ತಿ ಪಾಲ್ಗೊಳ್ಳಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರ ನೀಡಲಿದ್ದಾರೆ.
ಹೀಗಾಗಿ ಗ್ರಾಮಸ್ಥರು ಮುಕ್ತವಾಗಿ ತಮ್ಮ ಎಲ್ಲ ರೀತಿಯ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು. ನಂತರ ಸಹಕಾರದ ಮೂಲಕ ವಿವಿಧ ತೊಂದರೆಗಳನ್ನ ನಿವಾರಿಸಿಕೊಳ್ಳಬಹುದು ಎಂದರು. ಈ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಅಹವಾಲು ಸ್ವೀಕಾರದ ಜೊತೆಗೆ ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಜನರು ತಮಗೆ ಅಗತ್ಯವಿರುವ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆಯಬಹುದಾಗಿದೆ. ಜೊತೆಗೆ ಅರ್ಜಿ ಸಲ್ಲಿಸಿ ಸರಕಾರದ ಯೋಜನೆಗಳಡಿ ಅನುಕೂಲತೆ ಪಡೆದು ಸಭಲರಾಗಬಹುದು ಎಂದು ತಿಳಿಸಿದರು.ಭಟ್ಕಳ ತಹಶಿಲ್ದಾರ್ ರವಿಚಂದ್ರ ಎಸ್. ಮಾತನಾಡಿ, ವಿನೂತನ ಕಾರ್ಯಕ್ರಮ ಇದಾಗಿದ್ದು, ಸರಕಾರ ಕಂದಾಯ ಇಲಾಖೆಯಡಿ ರೂಪಿಸಿರುವ ವಿವಿಧ ಸಾಮಾಜೀಕ ಭದ್ರತಾ ಯೋಜನೆಗಳನ್ನ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ಈ ಉದ್ದೇಶದ ಈಡೆರಿಕೆಗೆ ಹಾಗೂ ವ್ಯಕ್ತಿಯ ಮನೆಯ ಬಾಗಿಲಿಗೆ ಸರಕಾರ ರೂಪಿಸಿದ ಯೋಜನೆಗಳನ್ನ ತಲುಪಿಸುವ ಪ್ರಯತ್ನವನ್ನ ಮಾಡಲಾಗುತ್ತಿದೆ. ಹೀಗಾಗಿ ಗ್ರಾಮದ ಜನರು ಗ್ರಾಮ ವಾಸ್ತವ್ಯದ ಸದುಪಯೋಗವನ್ನ ಪಡೆಯಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಉದ್ಘಾಟನೆಯ ನಂತರದಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಒಳಗೊಂಡ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿನ (ಪ್ರಭಾರ ) ಸಹಾಯಕ ಆಯುಕ್ತ ಸಾಜಿದ್ ಅಹಮದ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.